

ಬೆಂಗಳೂರು: ನಗರದಲ್ಲಿ ಶನಿವಾರ ಮತ್ತೆ ರಸ್ತೆ ಕುಸಿತವಾಗಿದೆ. ಬ್ರಿಗೇಡ್ ರಸ್ತೆ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ರಸ್ತೆ ಕುಸಿತಗೊಂಡ ಮಾದರಿಯಲ್ಲಿ ಇಟ್ಟಮಡು ಮುಖ್ಯರಸ್ತೆ ವ್ಯಾಪ್ತಿಯ ಮಾರುತಿ ನಗರದ ರಸ್ತೆ ಐದು ಅಡಿವರೆಗೆ ಕುಸಿದು ಕಂದಕ ಬಿದ್ದಿರುವುದರಿಂದ ಕೆಲ ಕಾಲ ಆತಂಕ ವಾತಾವರಣ ಉಂಟಾಯಿತು.
ನಗರದಲ್ಲಿ ಪದೇಪದೆ ರಸ್ತೆ ಕುಸಿತ ಘಟನೆಗಳು ಮರುಕಳಿಸುತ್ತಿದ್ದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ, ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಭಯದಲ್ಲೇ ಸವಾರರು ವಾಹನ ಚಲಾಯಿಸುವಂತಾಗಿದೆ. ರಸ್ತೆ ಕುಸಿತ ಜಾಗದ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಕಿರಿದಾದ ರಸ್ತೆ ಕುಸಿತದಿಂದ ವಾಹನ ದಟ್ಟಣೆಯಾಯಿತು. ಇದರ ಬಗ್ಗೆ ಪಾಲಿಕೆ ಗಮನಕ್ಕೆ ತಂದರೂ ಅಧಿಕಾರಿಗಳು ಧಾವಿಸಿಲ್ಲ. ಏನಾದರೂ ಅನಾಹುತವಾದರೆ ಬಿಬಿಎಂಪಿಯನ್ನೇ ಹೊಣೆ ಮಾಡಲಾಗುವುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೇ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯ ಸಪ್ತಗಿರಿ ಕಲ್ಯಾಣದ ಮಂಟಪ ಬಳಿ ಜಲಮಂಡಳಿಯ ನೀರಿನ ಪೈಪ್ ಸೋರಿಕೆಯಿಂದ 3 ಅಡಿಗೂ ಹೆಚ್ಚು ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು. ಈ ತಿಂಗಳ ಜ.12ರಂದು ಬ್ರಿಗೇಡ್ ರಸ್ತೆಯ ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ ಮತ್ತು ನೀರು ಸೋರಿಕೆಯಿಂದ ರಸ್ತೆ ಕುಸಿದು ಕಂದಕ ಉಂಟಾಗಿತ್ತು. ಇದರಿಂದ ಬೈಕ್ ಸವಾರ ಗಾಯಗೊಂಡಿದ್ದರು.
* 2022ರ ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅರ್ಥಶಾಸ್ತ್ರ ಕಾಲೇಜು ಸಮೀಪದ ರಸ್ತೆ ಕುಸಿತ
* 2022ರ ಅ.11ರಂದು ಮಾರತಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ಸಮೀಪ 200 ಮೀಟರ್ ಉದ್ದವರೆಗೆ ರಸ್ತೆ ಕುಸಿತ
* ಅ.17ರಂದು ಸ್ಯಾಂಕಿ ಕೆರೆ ರಸ್ತೆ, ಅ.20ರಂದು ಪಟ್ಟೆಗಾರಪಾಳ್ಯ ಮುಖ್ಯರಸ್ತೆ ಕುಸಿತ.