

ಕೋಟ: ಪ್ರಸ್ತುತ ದಿನಗಳಲ್ಲಿ ರಸ್ತೆ ಅವಘಡ ಹೆಚ್ಚುತ್ತಿವೆ, ಯುವ ಸಮುದಾಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಕೊರತೆಯೇ ಇದಕ್ಕೆ ಕಾರಣ ಎಂದು ಕುಂದಗನ್ನಡ ರಾಯಭಾರಿ ಮನು ಹಂದಾಡಿ ಹೇಳಿದರು.
ಕೋಟ ಮಾಂಗಲ್ಯ ಮಂದಿರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಉಪವಿಭಾಗ ಹಾಗೂ ಬ್ರಹ್ಮಾವರ ವೃತ್ತ, ಕೋಟ ಪೊಲೀಸ್ ಠಾಣೆ ಆಶ್ರಯದಲ್ಲಿ ಮಂಗಳವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆ ಸಹಕಾರದೊಂದಿಗೆ ಪ್ರಸಾದ ನೇತ್ರಾಲಯ ಉಡುಪಿ ವತಿಯಿಂದ ನೇತ್ರ ತಪಾಸಣಾ ಉಚಿತ ಶಿಬಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ ವತಿಯಿಂದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಉಡುಪಿ ಪ್ರಸಾದ್ ನೇತ್ರಾಲಯ ಮುಖ್ಯಸ್ಥ ಡಾ.ಪ್ರಸಾದ್ ಉದ್ಘಾಟಿಸಿದರು. ಉಡುಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಡಿವೈಎಸ್‌ಪಿ ಡಿ.ಟಿ.ಪ್ರಭು, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಕೋಟ ಪೊಲೀಸ್ ಠಾಣೆ ಅಪರಾಧ ದಳದ ಎಸ್.ಐ.ಸುಧಾ ಪ್ರಭು, ಕೋಟ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ ಉಪಸ್ಥಿತರಿದ್ದರು. ಕೋಟ ಠಾಣೆಯ ಪಿಎಸ್‌ಐ ರಾಘವೇಂದ್ರ ಸ್ವಾಗತಿಸಿ ಪ್ರಸ್ತಾವನೆಗೈದರು. ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಪ್ರಾರ್ಥಿಸಿದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.
ಕೋಟ ಅಮೃತೇಶ್ವರಿ ಸರ್ಕಲ್‌ನಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕೋಟ ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ.ಕುಂದರ್ ಚಾಲನೆ ನೀಡಿದರು. ಟ್ರಸ್ಟಿ ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಇದ್ದರು. ಇಸಿಆರ್ ಕಾಲೇಜು ವಿದ್ಯಾರ್ಥಿಗಳು, ಪಂಚವರ್ಣ ಸಂಘಟನೆ, ಅಮೃತ ಯುವಕ ಸಂಘ, ವಿವಿಧ ಸ್ಥಳೀಯ ಸಂಘಟನೆಗಳು ಭಾಗಿಯಾಗಿದ್ದರು.