ವಳಕಡಮ-ಗುಂಡಿಕಂಡ ರಸ್ತೆ ಕೆಸರುಮಯ: ಬಾಳೆಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

road
ಕೆಸರುಮಯ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ.
Published on

ವಿಜಯವಾಣಿ ಸುದ್ದಿಜಾಲ ಕಡಬ

ಕೊಯಿಲ ಗ್ರಾಮದ ವಳಕಡಮ-ಗುಂಡಿಕಂಡ ರಸ್ತೆ ಕೆಸರುಮಯವಾಗಿದ್ದು, ಗ್ರಾಮಸ್ಥರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಳಕಡಮ ಅಂಗನವಾಡಿಯಿಂದ ಗುಂಡಿಕಂಡಕ್ಕೆ ತೆರಳುವ ರಸ್ತೆ ತೀರ ಹದಗೆಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿಸಂಪೂರ್ಣ ಕೆಸರುಮಯವಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇಲ್ಲಿನ ಜನರಿಗೆ ಒದಗಿಬಂದಿದೆ.

ಈ ಭಾಗದಲ್ಲಿ ಹಲವು ಮನೆಗಳಿದ್ದು ಇವರೆಲ್ಲರೂ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ದ್ವಿಚಕ್ರ ವಾಹನ, ರಿಕ್ಷಾ, ಜೀಪು ಈ ರಸ್ತೆಯಲ್ಲಿ ದಿನನಿತ್ಯ ಓಡಾಟ ನಡೆಸುತ್ತಿವೆ. ಕಾಂಕ್ರೀಟ್ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಈ ಮನವಿಗೆ ಈ ತನಕವೂ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಎದ್ದುಬಿದ್ದು ಸಂಚರಿಸಬೇಕಾದ ಪರಿಸ್ಥಿತಿಯೂ ಗ್ರಾಮದ ಜನರಿಗೆ ತಪ್ಪಿಲ್ಲ. ಈ ಭಾಗದಲ್ಲಿ ಕೃಷಿಕರು, ಹೈನುಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೈನುಗಾರರು, ಕೃಷಿಕರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಈ ಸಂಪರ್ಕ ರಸ್ತೆಯನ್ನೇ ಅವಲಂಭಿಸಿರುವುದರಿಂದ ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕೆಸರುಮಯ ರಸ್ತೆಯಲ್ಲಿಯೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ರಸ್ತೆಯ ದುಸ್ಥಿತಿಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಕೆಸರುಮಯ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟವರು ಇನ್ನಾದರೂ ರಸ್ತೆಯ ಬಗ್ಗೆ ಗಮನ ಹರಿಸಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ರಸ್ತೆಯಲ್ಲಿ ನಡೆದು ಹೋಗಲೂ ಆಗುವುದಿಲ್ಲ. ರಸ್ತೆಗೆ ಚರಂಡಿ ವ್ಯವಸ್ಥೆಯೂ ಇಲ್ಲ. 30ರಿಂದ 50 ಮನೆಗೆ ಇದು ಸಂಪರ್ಕ ರಸ್ತೆಯಾಗಿದೆ. ರಸ್ತೆ ಕೆಸರುಮಯಗೊಂಡಿರುವುದರಿಂದ ಸಂಪರ್ಕವೇ ಕಡಿತಗೊಂಡಿದ್ದು ಜನರಿಗೆ ಓಡಾಟಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟವರು ಗಮನ ಹರಿಸಬೇಕು. - ಚೇತನ್ ವಳಕಡಮ, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net