ಹದಗೆಟ್ಟಿದೆ ಬಾಳೆಹಿತ್ಲು ರಸ್ತೆ

Balehithlu Road
ಸಂಪೂರ್ಣ ಹದಗೆಟ್ಟು ಹೊಂಡಗುಂಡಿಗಳಿಂದ ಕೂಡಿದ ಕಲ್ಯಾ-ನಿಟ್ಟೆ ಗ್ರಾಮವನ್ನು ಸಂಪರ್ಕಿಸುವ ಬಾಳೆಹಿತ್ಲು ರಸ್ತೆ.
Published on

-ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಲ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ನಿಟ್ಟೆ ಗ್ರಾಮವನ್ನು ಸಂಪರ್ಕಿಸುವ ಬಾಳೆಹಿತ್ಲು ರಸ್ತೆ ಸಂಪೂರ್ಣ ಹದಗೆಟ್ಟು ಹಲವು ವರ್ಷಗಳು ಕಳೆದರೂ ದುರಸ್ತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಒಂದೆಡೆ ಕಲ್ಯಾ ಗ್ರಾಪಂ ವ್ಯಾಪ್ತಿಯ ಶಿಶುಮಂದಿರದಿಂದ ನಿಟ್ಟೆ ಗ್ರಾಮದ ಬಜಕಳವನ್ನು ಸಂಪರ್ಕಿಸುವ ಬಾಳೆಹಿತ್ಲು ರಸ್ತೆ ಹೊಂಡ ಗುಂಡಿಗಳಿಂದ ತುಂಬಿದೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲುಸದ್ದಿದ್ದು,2-3 ಕಿ.ಮೀ ವರೆಗೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಮಟ್ಟವನ್ನು ತಲುಪಿದೆ.

ಈ ಭಾಗದಲ್ಲಿ ನಿತ್ಯ ಶಾಲಾ ಕಾಲೇಜು ಹಾಗೂ ನಿತ್ಯ ಕೆಲಸ ಕಾರ್ಯಕ್ಕೆ ತೆರಳುವ ಮಂದಿ ಹೊಂಡಗುಂಡಿ ತುಂಬಿದ ರಸ್ತೆಯಲ್ಲಿ ಸಂಚಾರಿಸಿ ಸುಸ್ತಾಗಿದ್ದಾರೆ. ಹಲವು ವರ್ಷಗಳಿಂದ ಈ ರಸ್ತೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನಾವಾಗಿಲ್ಲ. ಪ್ರತಿ ಬಾರಿ ಜನಪ್ರತಿನಿಧಿಗಳು ಅನುದಾನ ಮಂಜೂರಾಗಿದೆ ರಸ್ತೆಯ ಕಾಮಗಾರಿ ಆರಂಭವಾಗುತ್ತದೆ ಎನ್ನುವ ಉತ್ತರ ಬಿಟ್ಟರೆ ರಸ್ತೆಗೆ ಒಂದು ಬುಟ್ಟಿ ಕಲ್ಲು ಮಣ್ಣು ಕೂಡ ಇಲ್ಲಿವರೆಗೂ ಬಿದ್ದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಬೇಸಿಗೆಯಲ್ಲಿ ಹದಗೆಟ್ಟ ಈ ರಸ್ತೆಯಲ್ಲಿ ಧೂಳಿನ ಸಮಸ್ಯೆಯಿಂದ ಓಡಾಡುವಂತಿಲ್ಲ, ಈ ಭಾಗದಲ್ಲಿ ಕಲ್ಲು ಕೋರೆಗಳಿದ್ದು ನೂರಾರು ಭಾರಿ ವಾಹನಗಳು ಓಡಾಡುತ್ತವೆ. ಮಳೆಗಾಲ ಆರಂಭವಾದರೆ ರಸ್ತೆಯೇ ಕೆರೆಯಂತೆ ಮಾರ್ಪಾಡಾಗುತ್ತದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳಲ್ಲಿ ನೀರು ತುಂಬಿ ವಾಹನ ಸವಾರರು ಎದ್ದುಬಿದ್ದು ಅಪಘಾತ ಮಾಡಿಕೊಂಡ ನಿದರ್ಶನವೂ ಇಲ್ಲಿ ಸಾಕಷ್ಟಿದೆ.

ಅನುದಾನ ಎಲ್ಲಿ ಹೋಯಿತು?

ಇಲ್ಲಿನ ಸಮಸ್ಯೆಯ ಬಗ್ಗೆ ಸ್ಥಳೀಯರು ಜನಪ್ರತಿನಿಧಿ ಕಾಮಗಾರಿ ನಡೆದಿಲ್ಲ. ಹಾಗಾದರೆ ಬಿಡುಗಡೆಯಾದ ಅನುದಾನ ಎಲ್ಲಿ ಹೋಯಿತು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಪ್ರಮುಖ ರಸ್ತೆ

ಕಲ್ಯಾ ಗ್ರಾಪಂ ವ್ಯಾಪ್ತಿಯಿಂದ ನಿಟ್ಟೆ ಗ್ರಾಮದ ಲೆಮಿನ, ಬಜಕಳ, ಕುಂಟಾಡಿ, ಅತ್ತೂರು ಪದವು, ಪರಿಸರವನ್ನು ಸಂಪರ್ಕಿಸಲು ಈ ರಸ್ತೆಯೂ ತೀರ ಹತ್ತಿರವಾಗಿದ್ದು, ಜನ ಹೆಚ್ಚಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಇದೀಗ ತೀರ ಹದಗೆಟ್ಟ ಈ ರಸ್ತೆಯಿಂದ ಜನರು ಸುಮಾರು 7-8 ಕಿ.ಮೀ ಸುತ್ತಿ ಬಳಸಿಕೊಂಡು ಸಾಗಬೇಕಾದ ಪರಿಸ್ಥಿತಿಯಿದೆ. ಬಾಇದೀಗ ಸಂಕಷ್ಟ ಅನುಭವಿಸುವಂತಾಗಿದೆ.

ಈ ರಸ್ತೆಯಲ್ಲಿ ಬಸ್ಸು ಸಂಚಾರವಿಲ್ಲದೆ ಜನ ಬಾಡಿಗೆ ವಾಹನ ಅಥವಾ ಬೈಕ್ ಕಾರಿನಂತಹ ಸಣ್ಣಪುಟ್ಟ ವಾಹನವನ್ನು ಬಳಸಿಕೊಂಡು ಸಾಗಬೇಕಾಗಿದೆ. ತೀರ ಗ್ರಾಮೀಣ ಭಾಗದ ಕೆಟ್ಟುಹೋದ ಈ ರಸ್ತೆಯಲ್ಲಿ ಬಾಡಿಗೆಗೆ ವಾಹನಗಳು ಬರುತ್ತಿಲ್ಲ. ಕಲ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಶು ಮಂದಿರದ ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದರೂ ಉಳಿದ ನಿಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಹಿತ್ಲು ರಸ್ತೆಗೆ ಇನ್ನೂ ಕಾಲಕೂಡಿ ಬಂದಿಲ್ಲ. ಹೀಗಾಗಿ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಈ ರಸ್ತೆಗೆ ಡಾಂಬರು ಭಾಗ್ಯವನ್ನು ಕರುಣಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ರಸ್ತೆ ಹದಗೆಟ್ಟು ಹಲವು ವರ್ಷ ಕಳೆದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಹೊಂಡಗುಂಡಿಯಿಂದ ಕೂಡಿದ ಇದೇ ರಸ್ತೆಯಲ್ಲಿ ನಾವು ನಿತ್ಯ ಸಂಚರಿಸಬೇಕಾಗಿದೆ. ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. -ಶೇಖರ್, ಗ್ರಾಮಸ್ಥ

ಪ್ರತೀ ಬಾರಿ ಅನುದಾನ ಮಂಜೂರುಗೊಂಡಿದೆ ಎನ್ನುವುದು ಬಿಟ್ಟರೆ ಇಲ್ಲಿವರೆಗೂ ಕಾಮಗಾರಿ ಮಾತ್ರ ನಡೆದಿಲ್ಲ. ಸಂಪೂರ್ಣ ಹದಗೆಟ್ಟ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಬೈಕ್ ಸವಾರರಂತು ನಿತ್ಯ ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾಗಿದೆ. -ಪ್ರವೀಣ್, ವಾಹನ ಸವಾರ

ಈಗಾಗಲೇ ಈ ರಸ್ತೆಗೆ ಅನುದಾನ ಮಂಜೂರುಗೊಂಡಿದೆ. ಮಳೆಗಾಲ ಮುಗಿದ ಕೂಡಲೇ ರಸ್ತೆಯ ಕಾಮಗಾರಿ ನಡೆಯಲಿದೆ. -ಸತೀಶ್, ನಿಟ್ಟೆ ಗ್ರಾ.ಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net