

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಸ್ತೆ ಗುಂಡಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು, ರಸ್ತೆ ಗುಂಡಿ ಮುಚ್ಚದ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಲಾಗುವುದು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಎಚ್ಚರಿಕೆ ನೀಡಿದರು.
ನಗರದ ಎಂ.ಜಿ. ರಸ್ತೆಯಲ್ಲಿನ ನಗರಪಾಲಿಕೆ ಸಭಾಂಗಣದಲ್ಲಿ ಕೇಂದ್ರ ನಗರ ಪಾಲಿಕೆಯ ಎಲ್ಲ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ನಾಗರಿಕರ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಕಳೆದ ಸಭೆಯಲ್ಲಿ ಸೂಚನೆಯನ್ನು ನೀಡಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಬಿಸ್ಮೈಲ್ ವತಿಯಿಂದ ರೇಸ್ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಗುಂಡಿ ಮುಚ್ಚುವ ಕೆಲಸವನ್ನು ತುರ್ತಾಗಿ ನಿರ್ವಹಿಸಲು ಹಲವಾರು ಬಾರಿ ಸೂಚಿಸಿದ್ದರೂ ಕೆಲಸ ನಡೆಯುತ್ತಿಲ್ಲ. ಮುಂದಿನ 3 ದಿನಗಳ ಒಳಗಾಗಿ ಗುಂಡಿ ಮುಚ್ಚುವ ಕೆಲಸ ನಿರ್ವಹಿಸಲು ಸೂಚಿಸಿದರು. ಒಂದು ವೇಳೆ ಗುಂಡಿ ಮುಚ್ಚುವ ಕಾಮಗಾರಿ ನಿರ್ವಹಿಸದಿದ್ದಲ್ಲಿ ಹಾಗೂ ರ್ನಿಲಕ್ಷ$್ಯ ತೋರಿದಲ್ಲಿ ಅಂತಹ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಕಳೆದ ಎರಡು ದಿನಗಳಿಂದ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕಿನಿಂದ ನಡೆದಿದ್ದು, ಅದರಂತೆ ಸೋಮವಾರ ರಸ್ತೆ ಗುಂಡಿ ಹಾಗೂ ಪ್ಯಾಚ್ ವರ್ಕ್ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದಿಂದ ಕಲಾಸಿಪಾಳ್ಯ ಮುಖ್ಯ ರಸ್ತೆ, ಶಿವಾಜಿನಗರ ವಿಭಾಗದಿಂದ ದೊಮ್ಮಲೂರು, ಓಲ್ಡ್ ಏರ್ಪೊರ್ಟ್ ರಸ್ತೆಯ ಸರ್ವಿಸ್ ರಸ್ತೆ, ವಾರ್ಡ-112 ವ್ಯಾಪ್ತಿಯ ಸರ್ವಿಸ್ ರಸ್ತೆ, ಶಿವಾನಂದ ವೃತ್ತ ಹಾಗೂ ಶಿವಾನಂದ ವೃತ್ತದ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಸರ್ವಿಸ್ ರಸ್ತೆ, ಬಿ.ವಿ.ಕೆ. ಐಯ್ಯಂಗಾರ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಹಾಗೂ ಪ್ಯಾಚ್ ವರ್ಕ್ ಕೈಗೊಂಡಿದ್ದು, 2 ದಿನಗಳಲ್ಲಿ ಒಟ್ಟು 3,182 ಚ.ಮೀ. ವಿಸ್ತೀರ್ಣದ ಪ್ಯಾಚ್ವರ್ಕ್ ಹಾಗೂ 228 ಗುಂಡಿಗಳನ್ನು ಮುಚ್ಚಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಮುಖ್ಯ ಅಭಿಯಂತರರಾದ ವಿಜಯ ಕುಮಾರ್ ಹರಿದಾಸ್, ಸುಗುಣ ಇದ್ದರು.
ಬಾಕ್ಸ್
ರಸ್ತೆ ಅಗೆದು ಮತ್ತೆ ನಿರ್ಮಿಸದಿದ್ದರೆ ದಂಡ!
ಬೆಂಗಳೂರು ಜಲಮಂಡಳಿ ವತಿಯಿಂದ ಚರಂಡಿ ಮತ್ತು ಇತರೆ ಕಾಮಗಾರಿಗಾಗಿ ರಸ್ತೆ ಅಗೆದು ಅವುಗಳನ್ನು ಪುನರ್ ನಿರ್ಮಿಸದಿದ್ದಲ್ಲಿ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಹಾಗೂ ಅವರು ಕಾಮಗಾರಿ ನಿರ್ವಹಿಸಿದ ನಂತರ ಕಟ್ಟಡದ ತ್ಯಾಜ್ಯ ತೆರವುಗೊಳಿಸದಿದ್ದರೂ ದಂಡ ವಿಧಿಸಿ, ಅವರು ಕಾಮಗಾರಿ ನಿರ್ವಹಿಸುತ್ತಿರುವ ಸಾಮಗ್ರಿಗಳನ್ನು ವಶಪಡೆಯಲು ಆಯುಕ್ತರು ಸೂಚಿಸಿದರು.
ಪಶ್ಚಿಮ ಪಾಲಿಕೆಯಲ್ಲೂ ಪರಿಶೀಲನೆ
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಅವರು ಸೋಮವಾರ ಬೆಳಗ್ಗೆ ಗೋವಿಂದರಾಜನಗರ ವಿಭಾಗದ ಮೂಡಲಪಾಳ್ಯ ವಾರ್ಡ್ನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಿಯ ಪರಿಸ್ಥಿತಿ ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ರಸ್ತೆಗಳನ್ನು ಪರಿಶೀಲಿಸಿದ ಆಯುಕ್ತರು, ಗುಂಡಿಗಳನ್ನು ತಕ್ಷಣ ಮುಚ್ಚಿ ವಾಹನ ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸಲು ನಿರ್ದೇಶನ ನೀಡಿದರು. ಜಂಟಿ ಆಯುಕ್ತೆ ಆರತಿ ಆನಂದ್, ಸಂಗಪ್ಪ ಇದ್ದರು.