'ನಿತ್ಯ ಅಪಘಾತ’ ದುರಸ್ತಿಗಿಲ್ಲ ಕ್ರಮ !: ಹರಿನಗರ-ನಂದಿನಿನಗರ ರಸ್ತೆ ದುಸ್ತರ : ಗ್ರಾಮಸ್ಥರ ಆಕ್ರೋಶ

New Project (1)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಹರಿನಗರವನ್ನು ಸಂಪರ್ಕಿಸುವ ನಂದಿನಿನಗರದ ಬಳಿಯ ರಸ್ತೆ ಅಪಾಯಕಾರಿಯಾಗಿ ಕಿತ್ತುಹೋಗಿ ದಿನನಿತ್ಯ ವಾಹನಗಳು ಅಪಘಾತ ಸಂಭವಿಸುತ್ತಿವೆ. ಆದರೆ ದುರಸ್ತಿ ಮಾಡದೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ಖಂಡಿಸಿ ಸ್ಥಳೀಯ ನಾಗರಿಕರು ‘ರಸ್ತೆ ದುರಸ್ತಿ ನಿಮಗೆ ಅಸಾಧ್ಯವೆಂದಾದರೆ ಮತದಾನವನ್ನು ಬಹಿಷ್ಕರಿಸುವುದು ನಮಗೆ ಅನಿವಾರ್ಯ’ ಎಂದು ಜಿಲ್ಲಾಡಳಿತ ಸಹಿತ ಪಂಚಾಯಿತಿ ಆಡಳಿತಕ್ಕೆ ಲಿಖಿತ ಎಚ್ಚರಿಕೆ ನೀಡಿದ್ದಾರೆ.

ನಂದಿನಿ ನಗರ - ವೇದಶಂಕರ ನಗರ ರಸ್ತೆಯ ಇಳಿಜಾರು ಭಾಗದಲ್ಲಿ ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತು ಹೋಗಿ ಏರುತಗ್ಗುಗಳಿಂದ ಕೂಡಿದೆ. ಅಲ್ಲಿರುವ ಜಲ್ಲಿ ಕಲ್ಲುಗಳಿಗೆ ಸಿಲುಕಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.

ರಸ್ತೆ ದುರಸ್ತಿಗಾಗಿ ಸ್ಥಳೀಯರು ಪದೇಪದೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನ ತೋರದ ಆಡಳಿತ ವ್ಯವಸ್ಥೆಯಿಂದಾಗಿ ಅಲ್ಲಿನ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಕೆಲ ದಿನಗಳ ಹಿಂದೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ಮಕ್ಕಳು ಪ್ರಾಣಾಪಾಯಕ್ಕೆ ಸಿಲುಕಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯನ್ನು ದುರಸ್ತಿ ಮಾಡಲಾಗದಿದ್ದರೆ, ಯಾವೊಬ್ಬ ಜನಪ್ರತಿನಿಧಿಯೂ ಮುಂದಿನ ಯಾವುದೇ ಚುನಾವಣೆ ವೇಳೆ ನಮ್ಮ ಭಾಗಕ್ಕೆ ಕಾಲಿರಿಸಬಾರದು. ನಾವೆಲ್ಲರೂ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎಂದು ಜಿಲ್ಲಾಡಳಿತ ಹಾಗೂ ಪಂಚಾಯಿತಿ ಆಡಳಿತಕ್ಕೆ ಲಿಖಿತ ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ ಸೆಪ್ಟೆಂಬರ್ 15ನೇ ತಾರೀಕಿನ ಗಡುವು ನೀಡಿದ್ದಾರೆ.

ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ನಮ್ಮ ಭಾಗಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ನಮ್ಮ ಗ್ರಾಮದ ಪಂಚಾಯಿತಿ ಸದಸ್ಯರೊಬ್ಬರ ಮೇಲಿನ ರಾಜಕೀಯ ಜಿದ್ದಿಗಾಗಿ ನಮ್ಮ ವಾರ್ಡನ್ನು ಸತತ ಕಡೆಗಣಿಸಲಾಗುತ್ತಿದೆ. ಅವರ ರಾಜಕೀಯ ದ್ವೇಷ ಸಾಧನೆಗೆ ನಾವು ದಿನ ನಿತ್ಯ ಅಪಘಾತಕ್ಕೀಡಾಗಿ ಕೈಕಾಲು ಸೊಂಟ ಮುರಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದೇವೆ. ಇನ್ನು ಸಹಿಸಲು ಸಾಧ್ಯವಿಲ್ಲ. ಸುರಕ್ಷಿತ ರಸ್ತೆ ನಮ್ಮ ಬೇಡಿಕೆ. ಭರತ್ ಹರಿನಗರ ಸ್ಥಳೀಯ ನಿವಾಸಿ ಹರಿನಗರದ ನಿವಾಸಿಗರ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಪತ್ರ ಸ್ವೀಕರಿಸಲಾಗಿದೆ. ಈಗಾಗಲೇ ಅಡ್ವಾನ್ಸ್ ವರ್ಕ್ ಸಂಬಂಧ 40 ಲಕ್ಷ ರೂ. ಪಾವತಿಗೆ ಬಾಕಿ ಇರುವುದರಿಂದ ಇನ್ನು ಹೆಚ್ಚುವರಿ ಕೆಲಸ ನಿರ್ವಹಿಸಲು ಗುತ್ತಿಗೆದಾರರು ಒಪ್ಪುತ್ತಿಲ್ಲ. ಹೀಗಾಗಿ ಅಲ್ಲಿನ ರಸ್ತೆ ದುರಸ್ತಿ ಕಾಮಗಾರಿ ನಡೆಸಲು ಆಗಿರಲಿಲ್ಲ. ಇದೀಗ ಅಲ್ಲಿನ ಜನರು ಚುನಾವಣೆ ಬಹಿಷ್ಕಾರ ಮತ್ತು ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿರುವುದರಿಂದ, ಅವರ ನ್ಯಾಯೋಚಿತ ಬೇಡಿಕೆಯನ್ನು ಈಡೇರಿಸಲು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಸದಾನಂದ ಶೆಟ್ಟಿ, ಹಿರೆಬಂಡಾಡಿ ಗ್ರಾಪಂ ಅಧ್ಯಕ್ಷ ದಿನ ನಿತ್ಯ ಮಕ್ಕಳು, ಮಹಿಳೆಯರು ವಾಹನ ಅಪಘಾತದಿಂದ ಗಾಯಗೊಳ್ಳುತ್ತಿರುವುದು ಇಲ್ಲಿ ಸಾಮಾನ್ಯವೆಂಬಂತಾಗಿದೆ. ದಿನಕೂಲಿ ಸಂಪಾದನೆದಿಂದಲೇ ಕುಟುಂಬ ನಿರ್ವಹಿಸುವವರು ಕೈಕಾಲು ಮುರಿದು ದುಡಿಯಲಾಗದ ಸ್ಥಿತಿಗೆ ತಲುಪುವಂತಾಗಿದೆ. ಈ ಅಸಹಾಯಕ ಸ್ಥಿತಿಯಲ್ಲಿ ಇಲ್ಲಿನ ನಾಗರಿಕರು ಬದುಕುವಂತಾಗಿದೆ. ಮಂಜುನಾಥ್ ಹರಿನಗರ ಸಂತ್ರಸ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net