

ಅನ್ಸಾರ್ ಇನೋಳಿ ಉಳ್ಳಾಲ
ಸನಿಹದಲ್ಲೇ ಇರುವ ಮಂಗಳೂರು ವಿಶ್ವವಿದ್ಯಾಲಯ, ಹಿಂದು ರುದ್ರಭೂಮಿ ಸಂಪರ್ಕ ಕೊಂಡಿ. ಆದರೆ ಯಾವುದಕ್ಕೂ ಪ್ರಯೋಜನವೇ ಇಲ್ಲ. ಯಾಕೆಂದರೆ ಇಲ್ಲಿನ ರಸ್ತೆ ವಾಹನ ಸಂಚಾರ ಮಾತ್ರವಲ್ಲದೆ ನಡೆದಾಡಲೂ ನಾಲಾಯಕ್ ಎನಿಸಿದೆ. ಇದು ಕೊಣಾಜೆ ಗ್ರಾಮದ ಗುರುಮೇರು ಭಟ್ರಕೋಡಿ ದೇವಂದಬೆಟ್ಟು ರಸ್ತೆಯ ದುಸ್ಥಿತಿ!
ಸಂಪೂರ್ಣ ಕೃಷಿ ಪ್ರದೇಶ: ಹರೇಕಳ ಗ್ರಾಮದ ಎಲ್ಯಾರ್‌ಪದವು ಮುಖ್ಯ ರಸ್ತೆಯ ರೋಚಾ ಗೇಟ್‌ನಿಂದ ಒಳರಸ್ತೆಯಾಗಿ ಗುರುಮೇರು ಭಟ್ರಕೋಡಿ ದೇವಂದಬೆಟ್ಟು ಮೂಲಕ ಮಂಗಳೂರು ವಿಶ್ವವಿದ್ಯಾಲಯ, ಹಿಂದು ರುದ್ರಭೂಮಿಗೆ ಸಂಪರ್ಕ ರಸ್ತೆಯಾಗಿದೆ. ಇದು ಸಂಪೂರ್ಣ ಕಚ್ಚಾ ರಸ್ತೆಯಾಗಿದ್ದು ಒಂದು ಕಿ.ಮೀ ನಷ್ಟು ಅಂತರ ಇದ್ದು ಸಂಪೂರ್ಣ ಇಳಿಜಾರಾಗಿದೆ.
ಈ ಭಾಗದಲ್ಲಿ 15ರಷ್ಟು ಮನೆಗಳು, ಗುರುಮೇರು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀರಾಮ ಭಜನಾ ಮಂದಿರವಿದ್ದು, ಸಂಪೂರ್ಣ ಕೃಷಿಯಿಂದ ಆವೃತ್ತ ಪ್ರದೇಶ. ಶಾಲೆಗೆ ಹೋಗುವ ಮಕ್ಕಳು, ಪ್ರತಿದಿನ ಕೆಲಸಕ್ಕೆ ಹೋಗುವವರು, ವೃದ್ಧರೂ ಇಲ್ಲಿರುವ ಮನೆಯಲ್ಲಿ ವಾಸವಿದ್ದಾರೆ. ಇವರೆಲ್ಲರೂ ಬಸ್‌ಗಾಗಿ ಒಂದು ಕಿ.ಮೀ. ದೂರದ ಎಲ್ಯಾರ್‌ಪದವು ಬಳಿಯ ರೋಚಾ ರಸ್ತೆಗೇ ಬರಬೇಕು.
ವಾಹನ ಮಾರಾಟ!
ಇಲ್ಲಿ ವಾಸವಿರುವವರ ಬಳಿ ನಾಲ್ಕು ಚಕ್ರಗಳ ವಾಹನ ಇದ್ದರೂ ಸಂಚಾರ ಅಸಾಧ್ಯ ಎನಿಸಿದ್ದರಿಂದ ಮಾರಾಟ ಮಾಡಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ಹೋಲೋ ಬ್ಲಾಕ್ ಉದ್ಯಮ ಆರಂಭಿಸಿದರೂ ಸಾಮಗ್ರಿ ತರಲು ಮತ್ತು ಸಾಗಾಟ ಮಾಡಲು ವಾಹನಗಳು ಬರಲು ಅಸಾಧ್ಯವಾದ ಹಿನ್ನೆಲೆ ಉದ್ಯಮ ಬಂದ್ ಮಾಡಿದ್ದಾರೆ. ಇಲ್ಲಿನವರ ಜೀವನಕ್ಕೆ ಕೃಷಿಯೇ ಆಧಾರ, ಆದರೆ ಕೃಷಿ ವಸ್ತುಗಳು, ಪರಿಕರ ಸಾಗಾಟ ಸಾಧ್ಯವಾಗದೆ ಕಂಗೆಟ್ಟಿದ್ದಾರೆ. ಕೆಲವರಲ್ಲಿ ದ್ವಿಚಕ್ರ ವಾಹನ ಇದೆಯಾದರೂ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಹಲವು ವರ್ಷಗಳ ಹಿಂದೆ ಇಲ್ಲಿ ಕಾಲುದಾರಿ ಇದ್ದು, ಸ್ಥಳೀಯರೇ ರಸ್ತೆಯ ರೂಪ ನೀಡಿದ್ದರು. ಆದರೆ ಜನಪ್ರತಿನಿಧಿಗಳ ಕೃಪಕಟಾಕ್ಷ ಇಲ್ಲದ ಕಾರಣ ಈ ರಸ್ತೆ ಅಭಿವೃದ್ಧಿಯೇ ಆಗಿಲ್ಲ. ಬೇಸಗೆಯಲ್ಲಿ ರಸ್ತೆ ಚರಳು ಕಲ್ಲಿನಿಂದಾವೃತ್ತವಾದರೆ, ಮಳೆಗಾಲದಲ್ಲಿ ಚರಂಡಿಯಂತಾಗುತ್ತದೆ. ಜನಪ್ರತಿನಿಧಿಗಳ ಬಳಿ ಮಾಡಿದ ಮನವಿ ಪ್ರಯೋಜನವಾಗದೆ ಸ್ಥಳೀಯರು ಕಂಗೆಟ್ಟಿದ್ದಾರೆ.
ಸಂಬಂಧಪಟ್ಟ ರಸ್ತೆಗೆ ಕಾಂಕ್ರೀಟ್ ಅಳವಡಿಸಬೇಕಿದ್ದು ಪಂಚಾಯಿತಿಯಲ್ಲಿ ಅಷ್ಟೊಂದು ದೊಡ್ಡ ಅನುದಾನ ಇಲ್ಲ, ಈ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಮಾತುಕತೆ ನಡೆಸಿ ಅನುದಾನಕ್ಕೆ ಮನವಿ ಮಾಡಲಾಗುವುದು. ಶೇಖರ ಗಟ್ಟಿ ಸದಸ್ಯ, ಕೊಣಾಜೆ ಗ್ರಾಪಂ ಸ್ಥಳೀಯ ಪರಿಸರದಲ್ಲಿ ಹಲವು ಮನೆಗಳಿದ್ದು, ಶಾಲೆ, ಕಾಲೇಜಿಗೆ ಹೋಗುವ ಮಳು, ವೃದ್ಧರು, ಪ್ರತಿದಿನ ಕೆಲಸಕ್ಕೆ ಹೋಗುವವರೂ ಇದ್ದಾರೆ. ಆದರೆ ಇಲ್ಲಿನ ರಸ್ತೆ ದುರವಸ್ತೆಯಿಂದ ತುರ್ತು ಕೆಲಸಗಳಿಗೆ ಹೋಗಲೂ ವಾಹನಗಳು ಬರುತ್ತಿಲ್ಲ. ಸ್ಥಳೀಯರು ತಮ್ಮಲ್ಲಿದ್ದ ವಾಹನ ಬಳಸಲಾಗದೆ ಮಾರಾಟ ಮಾಡಿದ್ದಾರೆ. ಟೀಚರ್ ನಿಮಿತಾ ಕುಮಾರಿ ಸ್ಥಳೀಯ ನಿವಾಸಿ ಹಲವು ವರ್ಷಗಳಿಂದ ವಾಸವಿದ್ದೇವೆ, ಕೆಲವು ವರ್ಷಗಳ ಹಿಂದೆ ಸ್ಥಳೀಯರೇ ರಸ್ತೆ ನಿರ್ಮಿಸಿದ್ದಾರೆ, ಆದರೆ ಇಳಿಜಾರು ಆಗಿದ್ದು ಮಳೆಗಾಲದಲ್ಲಿ ವಾಹನದಲ್ಲಿ ಮಾತ್ರವಲ್ಲದೆ ನಡೆದುಕೊಂಡು ಹೋಗಲೂ ಕಷ್ಟವಾಗುತ್ತದೆ, ಕಾಂಕ್ರೀಟ್ ಹಾಕಿ ಸಮಸ್ಯೆಗೆ ಪರಿಹಾರ ಕಲ್ಪಿಸಿ. ಲಿಲ್ಲಿ ಟೆಲ್ಲಿಸ್, ಹಿರಿಯ ಮಹಿಳೆ