ಡಿಜಿಟಲ್ ಅರೆಸ್ಟ್ ಮಹಿಳೆಗೆ 3.9 ಕೋಟಿ ರೂ. ವಂಚನೆ

Fruad
Published on

ಮಂಗಳೂರು: ಸೇವಾ ನಿವೃತ್ತಿ ಹೊಂದಿದ್ದ ಮಹಿಳೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಅಪರಿಚಿತರು 3.9 ಕೋಟಿ ರೂ. ವಂಚಿಸಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆ ಲೆನಿ ಪ್ರಭು ಅವರಿಗೆ ಜ.15ರಂದು ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿದ್ದು, ಸ್ವಲ್ಪ ಹೊತ್ತಿನ ಬಳಿಕ ಅವರು ಆ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮಹಿಳೆಯೊಬ್ಬರು ನೀವು ಚೈನಾಕ್ಕೆ ಕಳುಹಿಸಿದ ಪಾರ್ಸಲ್ ರಿಟರ್ನ್ ಆಗಿದೆ. ಅದರಲ್ಲಿ 150 ಗ್ರಾಂ ಎಂಡಿಎಂಎ ಇದೆ, ಈ ಪ್ರಕರಣದಲ್ಲಿ 75 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಇದೆ ಎಂದು ಮಹಿಳೆ ತಿಳಿಸಿದ್ದಾಳೆ. ತಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎಂದು ಹೇಳಿದರೂ, ಮಹಿಳೆ ನೀವೇ ಕಳುಹಿಸಿರುವ ದಾಖಲೆಯಾಗಿ ನಿಮ್ಮ ಐಡಿ ಕಾರ್ಡ್ ಹಾಗೂ ಹೆಸರು ಇದೆ. ನಾನು ಜನರಲ್ ಪೋಸ್ಟ್ ಆಫೀಸ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾಳೆ.

ಬಳಿಕ ವೈಯಕ್ತಿಕ ವಿವರವನ್ನು ಪಡೆದು, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿ, ನಿಮಗೆ ‘ನೊ ಒಬ್ಜೆಕ್ಷನ್ ಸರ್ಟಿಫಿಕೇಟ್’ ಸಿಗಬೇಕಾದರೆ ನಿಮ್ಮ ಸಂಬಳದ ಶೇ.93ರಷ್ಟು ದುಡ್ಡು ಕಳುಹಿಸಬೇಕು ಎಂದು ತಿಳಿಸಿದ್ದಾಳೆ.

ಅದರಂತೆ ಜ.17ರಂದು 55 ಲಕ್ಷ ರೂ. ವನ್ನು ಆರ್‌ಟಿಜಿಎಸ್ ಮೂಲಕ ಕಳುಹಿಸಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಭಯ ಹುಟ್ಟಿಸಿದ್ದಾಳೆ. ಆ ಬಳಿಕ ಆಕೆ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜು.4ರ ವರೆಗೆ ಒಟ್ಟು 3,09,75,000 ರೂ. ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಅನಂತರದ ದಿನಗಳಲ್ಲಿ ಆಕೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ ಮೋಸ ಹೋಗಿರುವುದು ಅರಿವಾಗಿದೆ.

ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್‌ಲೈನ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net