

ಕಾರವಾರ: ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಮೃತ ದೇಹವನ್ನು ಸುಮಾರು ಮೂರು ಕಿಮೀ ಜೋಲಿ ಕಟ್ಟಿ ಹೊತ್ತುಕೊಂಡ ಹೋದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
ಗುಡ್ಡಳ್ಳಿ ನಿವಾಸಿ, ಬಂದರು ಇಲಾಖೆ ನಿವೃತ್ತ ಉದ್ಯೋಗಿ ರಾಮಾ ಮನ್ನಾ ಗೌಡ(75) ಶನಿವಾರ ಅನಾರೋಗ್ಯದ ಕಾರಣ ಜಿಲ್ಲಾ ಆಸ್ಪತ್ರೆ ಸೇರಿದ್ದರು. ರಾತ್ರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂಬುಲೆನ್ಸ್ ಗುಡ್ಡಳ್ಳಿಗೆ ತೆರಳುವ ಮಾರ್ಗದಲ್ಲಿ ಹೈಚರ್ಚ್ ಸಮೀಪವೇ ಮುಂದೆ ಹೋಗಲಾರದೇ ನಿಂತಿದೆ. ಇದರಿಂದ ಕುಟುಂಬಸ್ಥರು ರಾಮಾ ಅವರ ದೇಹವನ್ನು ಕಂಬಳಿಯಲ್ಲಿ ಸುತ್ತಿ, ಮರದ ಬಡಿಗೆಯೊಂದಕ್ಕೆ ಹಗ್ಗದಿಂದ ಕಟ್ಟಿ ಜೋಲಿ ಮಾಡಿಕೊಂಡು ಹೊತ್ತುಕೊಂಡು ಹೋಗಿದ್ದಾರೆ. ಹಾಲಿ ಎಂಎಲ್‌ಸಿ ಗಣಪತಿ ಉಳ್ವೇಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಇತರೂ ಆಗಮಿಸಿ ಈ ಘಟನೆಗೆ ಸಾಕ್ಷಿಯಾದರು.
ಗುಡ್ಡಳ್ಳಿ ಕಾರವಾರ ನಗರಸಭೆ ವ್ಯಾಪ್ತಿಯ ಬಿಣಗಾ ವಾರ್ಡ್ಗೆ ಸೇರಿದೆ. ಗುಡ್ಡಳ್ಳಿಯಲ್ಲಿ ಸುಮಾರು 25 ಮನೆಗಳಿದ್ದು, 100 ಕ್ಕೂ ಅಽಕ ಜನಸಂಖ್ಯೆ ಇದೆ. ಆದರೆ, ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ನಗರಸಭೆಯಿಂದ ಮಾಡಿದ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋಗುತ್ತದೆ. ಇದರಿಂದ ಊರಿನವರು ನಡೆದೇ ಮನೆ ಸೇರುತ್ತಾರೆ. ದಿನಸಿ ಹಾಗೂ ನಿರ್ಮಾಣ ಸಾಮಗ್ರಿಗಳನ್ನು ತಲೆ, ಹೊರೆಯ ಮೇಲೆ ಹೊತ್ತು ಸಾಗುತ್ತಾರೆ.