

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕ್ಷೇತ್ರದ ಜನರಿಗೆ ನಾಲ್ಕೈದು ತಿಂಗಳಲ್ಲಿ 14 ವರ್ಷ ವನವಾಸ ಮಾಡಿದ ಅನುಭವವಾಗಿದೆ. ಹೊಸ ರಸ್ತೆ ನಿರ್ಮಾಣ ಇರಲಿ, ಹಳೇ ರಸ್ತೆಗಳಲ್ಲಿನ ಗುಂಡಿ ಮುಚ್ಚಲೂ ಆಗುತ್ತಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿನ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಇಲ್ಲಿನವರ ಆಡಳಿತ ನೋಡಿ, ಜನ ಬೇಸತ್ತು ಹೋಗಿದ್ದಾರೆ. ಯಾವುದೋ ಪೂರ್ವ ಜನ್ಮದ ಸುಕೃತದ ಲದಿಂದ ಜನರ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಈಗಲಾದರೂ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಿರ್ವಹಣೆ, ಅಭಿವೃದ್ಧಿ ಕೆಲಸ, ಜನರ ಸಮಸ್ಯೆಗಳ ಕಡೆಗೆ ಗಮನ ಕೊಡಲಿ ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸಲಹೆ ನೀಡಿದರು.
ಕರ್ನಾಟಕವನ್ನು ಸಂಪದ್ಭರಿತ ಪ್ರದೇಶವನ್ನಾಗಿಸಲಾಗುತ್ತಿದೆ ಎಂಬುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಮಳೆಗಾಲದಲ್ಲೂ ಕೆಲ ಗ್ರಾಮಗಳಲ್ಲಿ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇದರ ನಡುವೆ ಕೊಳವೆಬಾವಿ ಕೊರೆಸಲು ಹಣ ಇಲ್ಲ. ಹಾಗಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಅಧಿಕಾರಿಗಳ ಅಸಹಾಯಕತೆ ಬಗ್ಗೆ ಮರುಕ ವ್ಯಕ್ತಪಡಿಸಿದರು.
ಹೊಸ ರಸ್ತೆಗಳ ನಿರ್ಮಾಣ ಕೆಲಸವಾಗುತ್ತಿಲ್ಲ. ಅನುದಾನದ ಕೊರತೆ ಇದೆ. ಇನ್ನು ಹದಗೆಟ್ಟ ಹಳೇ ರಸ್ತೆಗಳಲ್ಲಿನ ಗುಂಡಿಗಳನ್ನಾದರೂ ಮುಚ್ಚಬೇಕು. ಆದರೆ, ಇದೂ ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಬೇಸರಿಸಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಜಿಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಮತ್ತಿತರರು ಇದ್ದರು.
ಅವರ ನಾಯಕರ ಮನೇನೇ ನೋಡಿಲ್ಲ
ಅವರಿಗೆ (ಶಾಸಕ ಪ್ರದೀಪ್ ಈಶ್ವರ್‌ಗೆ) ಜನರ ಜತೆ ಇದ್ದು ಅಭ್ಯಾಸ ಇಲ್ಲ. ಅವರ ಮನೆಯನ್ನು ನಾಯಕರೇ ನೋಡಿಲ್ಲ. ಹಾಗೆಯೇ ಮನೆ ವಿಳಾಸವೂ ಗೊತ್ತಿಲ್ಲ. ಇನ್ನೆಲ್ಲಿ ಸುಲಭವಾಗಿ ಸಿಗುತ್ತಾರೆ ಎಂದು ಸಂಸದರು ಕಿಡಿಕಾರಿದರು. ನನ್ನ ಕರ್ತವ್ಯ ನನಗೆ ಗೊತ್ತಿದೆ. ಅವರ ಕರ್ತವ್ಯವನ್ನು ಅವರು ಮಾಡಲಿ. ನಾನು ಇರೋದೇ ಹೀಗೆ, ಮೊದಲಿನಿಂದಲೂ ಜನರ ಮಧ್ಯೆ ಇರುತ್ತಿದ್ದು ಅವರ ನೀಡಿದ ಭಿಕ್ಷೆಯಿಂದ ಅಧಿಕಾರ ಸಿಕ್ಕಿದೆ. ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಿ, ಸಂಸದರನ್ನಾಗಿಸಿದ್ದಾರೆ ಎಂದು ಕುಟುಕಿದರು.
ಅಭಿವೃದ್ಧಿ ದಾರಿದ್ರ್ಯದ ಪರಮಾವಧಿ
ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿನ ಕೈಗೊಂಡ ಅಭಿವೃದ್ಧಿ ಕೆಲಸಗಳ ನಾಮಲಕಗಳಿಗೆ ಬಣ್ಣ ಬಳಿಯುವ, ಕಿತ್ತು ಹಾಕುವ ಇಲ್ಲವೇ, ಹಳೇ ಕೆಲಸಕ್ಕೆ ಹೊಸ ಬೋರ್ಡು ಹಾಕಲಾಗುತ್ತಿದೆ. ಇದು ಅಭಿವೃದ್ಧಿ ದಾರಿದ್ರ್ಯದ ಪರಮಾವಧಿ ಎಂದು ಸಂಸದ ಡಾ. ಕೆ. ಸುಧಾಕರ್ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನನ್ನ ಚಿತ್ರವಿರುವ ಲಕಗಳನ್ನು ತೆಗೆದು, ಹೊಸ ಶಾಸಕರ ಪೋಟೋ ಹಾಕಲು ಮುಂದಾಗಿದ್ದಾರೆ. ನನ್ನ ಅವಧಿಯಲ್ಲಿ ನೂರಾರು ಕಡೆ ಅಭಿವೃದ್ಧಿ ಕೆಲಸಗಳು ನಡೆದಿವೆ. ಇಲ್ಲೆಲ್ಲ ಲಕಗಳನ್ನು ತೆಗೆಯುತ್ತಾರೆ, ಇಲ್ಲವೆ ಬಣ್ಣ ಹಚ್ಚಬಹುದು. ಆದರೆ, ಜನರ ಮನಸ್ಸಿನಲ್ಲಿರುವ ಸುಧಾಕರ್ ಬಗೆಗಿನ ಒಲವನ್ನು ಅಳಿಸಲು ಸಾಧ್ಯವಿಲ್ಲ ಎಂದರು.
ಪ್ರತಿವಾರ ಜನರ ಭೇಟಿ
ಅಧಿವೇಶನದ ದಿನಗಳನ್ನು ಹೊರತುಪಡಿಸಿದಂತೆ ವಾರದಲ್ಲಿ ಪ್ರತಿ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಜನಸಾಮಾನ್ಯರು, ಅಸಹಾಯಕರು ನೇರವಾಗಿ ಬಂದು ಭೇಟಿ ಮಾಡಬಹುದು. ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಮೇತ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದು ಸ್ಥಳದಲ್ಲಿಯೇ ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲಾಗುವುದು ಎಂದು ಸಂಸದ ಡಾ. ಕೆ.ಸುಧಾಕರ್ ಭರವಸೆ ನೀಡಿದರು.