ಸುಗಮ ಸಂಚಾರಕ್ಕೆ ಅಡ್ಡಿಯಾದ ರಸ್ತೆ ಗುಂಡಿ

FotoJet (4)
Published on

ಕಿತ್ತುಬಂದ ಜಲ್ಲಿ, ಹಳ್ಳಗಳ ನಡುವೆ ಸಂಚಾರ ದುಸ್ತರ | ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಕಿಡಿ


ಎನ್.ವಿ.ವೆಂಕಟೇಶ್ ಗುಡಿಬಂಡೆ
ರಾಷ್ಟ್ರೀಯ ಹೆದ್ದಾರಿ 44ರಿಂದ ಮುದ್ದರೆಡ್ಡಿಹಳ್ಳಿ ಮಾರ್ಗವಾಗಿ ಗೆಗ್ಗಿಲರಾಳ್ಳಹಳ್ಳಿ ಸೇರಿ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟು ಗುಂಡಿಗಳು ಬಿದ್ದಿವೆ. ಇದರಿಂದ ಪ್ರತಿದಿನ ಶಾಲಾ ಮಕ್ಕಳು ಸೇರಿ ಈ ಭಾಗದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ತಾಲೂಕಿನ ವರ‌್ಲಕೊಂಡ ಗ್ರಾಮದಿಂದ ಅಂದರೆ, ರಾಷ್ಟ್ರೀಯ ಹೆದ್ದಾರಿ-44ರಿಂದ ಮುದ್ದರೆಡ್ಡಿಹಳ್ಳಿ, ಗೆಗ್ಗಿಲರಾಳ್ಳಹಳ್ಳಿ, ಗಂಗಾನಹಳ್ಳಿ, ಸೊಮೇಶ್ವರ ಸೇರಿ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹದಗೆಟ್ಟು ಸಂಚರಿಸಲು ಹರಸಾಹಸ ಪಡಬೇಕಿದೆ. ದೊಡ್ಡ ಗುಂಡಿಗಳು ಬಿದ್ದಿವೆ. ರಸ್ತೆಗೆ ಡಾಂಬರು ಹಾಕಿ ವರ್ಷಗಳೇ ಕಳೆದಿದ್ದು, ಜಲ್ಲಿಕಲ್ಲುಗಳು ಕಿತ್ತುಬಂದಿದ್ದು, ದ್ವಿಚಕ್ರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಈ ಭಾಗದ ಗ್ರಾಮಸ್ಥರು ದೂರುತ್ತಿದ್ದಾರೆ.
ಮಳೆ ಬಂದರೆ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆ ಎಲ್ಲಿದೆ ಎಂದು ಹುಡುಕುವಂತಾಗಿದೆ. ಬೇಸಿಗೆಯಲ್ಲಿ ಧೂಳಿನ ಮಜ್ಜನ ಸಾಮಾನ್ಯವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ರಸ್ತೆ ಮಂಜೂರು ನೆಪ
ರಸ್ತೆ ಹದಗೆಟಿದ್ದು, ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆ ಮಂಜೂರಾಗಿದೆ ಎಂದಷ್ಟೇ ಅಧಿಕಾರಿಗಳು ಉತ್ತರಿಸುತ್ತಾರೆಯೇ ವಿನಹ ಕಾಮಗಾರಿ ಆರಂಭಿಸುತ್ತಿಲ್ಲ. ಪ್ರತಿ ಬಾರಿಯೂ ಏನೋ ಒಂದು ನೆಪ ಹೇಳಿ ನಮ್ಮನ್ನು ಕಳಿಸುತ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಪಾಲಕರ ಅಸಮಾಧಾನ
ತಾಲೂಕಿನ ಸೋಮೇನಹಳ್ಳಿ ಬಳಿ ಅಂದರೆ ಗೆಗ್ಗಿಲರಾಳ್ಳಹಳ್ಳಿಯ ಹೊರವಲಯದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಇದ್ದು, ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ನೋಡಲು ಬರುವ ಪಾಲಕರು ಹದಗೆಟ್ಟ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ರಜಾ ದಿನಗಳಲ್ಲಿ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಮನೆಗೆ ಕರೆತರುವುದು ಕಷ್ಟವಾಗುತ್ತಿದೆ ಎನ್ನುವುದು ಪಾಲಕರ ಅಳಲು.

ತಾಲೂಕಿನ ವರ‌್ಲಕೊಂಡ ಗ್ರಾಮದಿಂದ ಮುದ್ದರೆಡ್ಡಿಗ್ರಾಮದ ಮಾರ್ಗವಾಗಿ ನಮ್ಮ ಗ್ರಾಮಕ್ಕೆ ಬರುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ, ರಸ್ತೆ ದುರಸ್ತಿ ಮಾಡಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆ ಆಗಿದೆ ಎನ್ನುವ ಅಧಿಕಾರಿಗಳು ಕಾಮಗಾರಿಯನ್ನು ಆರಂಭಿಸುತ್ತಿಲ್ಲ.ಚನ್ನರಾಯಪ್ಪಗೆಗ್ಗಿಲರಾಳ್ಳಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net