

* ಕವಣಾಪುರ-ಹೊಸದೊಡ್ಡಿ ಮಾರ್ಗದಲ್ಲಿ ಮಾರುದ್ದ ಗುಂಡಿ
* ಮಳೆ ನೀರು ನಿಂತು ಅಧ್ವಾನ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಕವಣಾಪುರ-ಹೊಸದೊಡ್ಡಿ ಅಡ್ಡರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿ ಬಿದ್ದು, ಮಳೆ ಬಂದಾಗ ಮಾರ್ಗ ಕೆಸರುಮಯವಾಗುತ್ತಿದ್ದು, ಸಂಚಾರಕ್ಕೆ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಕೈಲಾಂಚ ಹೋಬಳಿಯಿಂದ ಜಿಲ್ಲಾ ಕೇಂದ್ರ ಸಂಪರ್ಕಿಸುವ ಕವಣಾಪುರ ರೇವಣಸಿದ್ದೇಶ್ವರ ಬೆಟ್ಟದ ರಸ್ತೆಯಿಂದ ಹೊಸದೊಡ್ಡಿ ಸೇರುವ ಮಾರ್ಗವನ್ನು ಕಳೆದ 7-8 ವರ್ಷಗಳ ಹಿಂದೆ ಡಾಂಬರು ಹಾಕಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ರಸ್ತೆಯನ್ನು ಸೂಕ್ತ ನಿರ್ವಹಣೆ ಮಾಡದ ಕಾರಣ ಡಾಂಬರು ಕಿತ್ತು ಹೆಜ್ಜೆಹೆಜ್ಜೆಗೂ ಗುಂಡಿಗಳು ಬಿದ್ದಿವೆ. ಹೆಚ್ಚಿದ ವಾಹನ ಸಂಚಾರದಿಂದ ಗುಂಡಿಗಳು ದಿನೇದಿನೆ ದೊಡ್ಡದಾಗುತ್ತಿದ್ದು, ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುತ್ತ ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ.
ರಾಮನಗರಕ್ಕೆ 24*7 ಕುಡಿಯುವ ನೀರು ಪೂರೈಸುವ ಯೋಜನೆಯ ಪೈಪ್‌ಗಳನ್ನು ರಸ್ತೆಯ ಒಂದು ಬದಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಪೈಪ್‌ಗಳನ್ನು ಅಳವಡಿಸಲು ರಸ್ತೆಯ ಮತ್ತೊಂದು ಬದಿಯಲ್ಲಿ ಅಗೆದ ಕಾರಣ ಮಾರ್ಗ ಮತ್ತಷ್ಟು ಹಾಳಾಗಿದೆ. ರಸ್ತೆದುದ್ದಕ್ಕೂ ಎರಡೂಬದಿ ಚರಂಡಿ ಕಾಲುವೆಗಳೇ ಇದ್ದು, ಇದರಿಂದ ಅಕ್ಕಪಕ್ಕದ ಜಮೀನಿನ ನೀರು ರಸ್ತೆಗೆ ಬಂದು ನಿಲ್ಲುತ್ತದೆ.
ಮಳೆಯಾದಾಗ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ಗುಂಡಿಗಳು ಮಿನಿ ಕೆರೆಗಳಂತೆ ಕಾಣುತ್ತಿವೆ. ಇದು ರಸ್ತೆಯೋ ಅಥವಾ ಗುಂಡಿಗಳೋ ಎನ್ನುವಂತಾಗಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಕುತ್ತು ಗ್ಯಾರಂಟಿ ಎನ್ನುವಂತಾಗಿದೆ.
ತೆಂಗಿನಕಲ್ಲು ಅರಣ್ಯಕ್ಕೆ ಬರುವ ಆನೆಗಳು ಆಗಿಂದಾಗ್ಗೆ ಇದೇ ಮಾರ್ಗ ಮಧ್ಯೆ ಹಾದು ಹೋಗುತ್ತವೆ. ಕೆಲವೊಮ್ಮೆ ಹಗಲಲ್ಲೇ ರಸ್ತೆ ದಾಟುತ್ತವೆ. ಇಡೀ ದಿನ ಮಾರುಕಟ್ಟೆಗೆ ಓಡಾಟ ನಡೆಸುವ ದ್ವಿಚಕ್ರ ವಾಹನ ಸವಾರರು, ರಸ್ತೆ ಸರಿಯಿಲ್ಲದ ಕಾರಣ ನಿಧಾನವಾಗಿ ಸಂಚರಿಸಬೇಕು. ಈ ವೇಳೆ ಆನೆಗಳು ಕಾಣಿಸಿಕೊಂಡರೆ ದೇವರೇ ಗತಿ ಎನ್ನುತ್ತಾರೆ ಹೊಸದೊಡ್ಡಿ ಯೋಗೇಶ್.
ಕವಣಾಪುರ ಅಡ್ಡರಸ್ತೆಯಿಂದ ಹೊಸದೊಡ್ಡಿ ನಂಜಾಪುರ ದೊಡ್ಡನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಕಾಡನಕುಪ್ಪೆ-ಕವಣಾಪುರ ಮಾರ್ಗದಿಂದ ಬರುವ ರಾಮನಗರ ಹಾಗೂ ಚನ್ನಪಟ್ಟಣದ ಖಾಸಗಿ ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ, ರಸ್ತೆಯಲ್ಲಿನ ಗುಂಡಿಗಳು ಶಾಲಾ ಬಸ್‌ಗಳ ಓಡಾಟಕ್ಕೂ ಸಮಸ್ಯೆ ತಂದೊಡ್ಡಿವೆ. ಅಲ್ಲದೆ ರಾಮನಗರ ತಾಲೂಕಿನ ಕಾಡನಕುಪ್ಪೆ, ಹೊಸದೊಡ್ಡಿ, ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ, ಭೂಹಳ್ಳಿ, ಮೆಣಸಿಗನಹಳ್ಳಿ, ದೊಡ್ಡನಹಳ್ಳಿ, ಮಲ್ಲಂಗೆರೆ, ವಿಠಲೇನಹಳ್ಳಿ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರ, ಮಾರುಕಟ್ಟೆ ಹಾಗೂ ಶಾಲೆಗಳಿಗೆ ಹೋಗಲು ಹತ್ತಿರದ ರಸ್ತೆ ಎಂದು ಹೆಚ್ಚಾಗಿ ಈ ಮಾರ್ಗವನ್ನೇ ಬಳಸುತ್ತಾರೆ. ಜತೆಗೆ ಪ್ರಸಿದ್ಧ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ, ಕಬ್ಬಾಳು ದೇವಾಲಯದಿಂದ ಕೈಲಾಂಚ ಕನಕಪುರ ರಸ್ತೆಗೆ ಬರುವವರು, ಕನಕಪುರ ರಸ್ತೆಗೆ ಸಂಪರ್ಕ ಪಡೆಯುವವರು, ಚನ್ನಪಟ್ಟಣ ತಾಲೂಕಿನಿಂದ ಕಾಡನಕುಪ್ಪೆ ಭಾಗದಿಂದ ಕೈಲಾಂಚ ಹೋಬಳಿ ಕೇಂದ್ರಕ್ಕೆ ಹೋಗುವವರು ಹೆಚ್ಚಾಗಿ ಇದೇ ದಾರಿಯಲ್ಲಿ ಸಂಚರಿಸುತ್ತಾರೆ.
ಕವಣಾಪುರ, ಹೊಸದೊಡ್ಡಿ, ನಂಜಾಪುರಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ರಸ್ತೆ ಕಾಮಗಾರಿ ನಡೆಸುವ ಭರಸವಸೆ ನೀಡಿದ್ದಾರೆ.ಜಯಣ್ಣ, ಹೊಸದೊಡ್ಡಿಕ್ಷೇತ್ರದ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದ್ದು, ಕವಣಾಪುರ-ಹೊಸದೊಡ್ಡಿ ರಸ್ತೆ ಅಭಿವೃದ್ಧಿಗೆ 2.40 ಕೋಟಿ ರೂ., ಕೆ.ಜಿ.ಹೊಸಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರಸ್ತೆಗೆ 99 ಲಕ್ಷ ರೂ., ಕೈಲಾಂಚ ಅಂಕನಹಳ್ಳಿ ರಸ್ತೆ ಅಭಿವೃದ್ಧಿಗೆ 99 ಲಕ್ಷ ರೂ. ಅನುದಾನ ತರಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.ಎಚ್.ಎ.ಇಕ್ಬಾಲ್ ಹುಸೇನ್ಶಾಸಕ, ರಾಮನಗರ