

ಸುಳ್ಯ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವಾಡುವ ಸಂದರ್ಭ ರಸ್ತೆ ಬದಿ ತೆಗೆದ ಹೊಂಡ ಅಸಮರ್ಪಕವಾಗಿದ್ದು, ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ಮಕರ್ಂಜ ಗ್ರಾಮಸ್ಥರು ಆರೋಪಿಸಿದ್ದಾರೆ.
ಮಕರ್ಂಜದಿಂದ ಗೋಳಿಯಡ್ಕಕ್ಕೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಅಂತಹ ರಸ್ತೆಯ ಬದಿ ಅವೈಜ್ಞಾನಿಕವಾಗಿ ಅಗೆದು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಪೈಪ್ ಹಾಕಲು ತೆಗೆದ ಹೊಂಡದ ಪರಿಣಾಮ ಇದ್ದ ಡಾಂಬರು ರಸ್ತೆಯು ಕಚ್ಚಾ ರಸ್ತೆಯಾದಂತಾಗಿದೆ. ರಸ್ತೆಯ ಅಗಲ ಕಿರಿದಾದ ಕಾರಣ ಕೊಟ್ರಡ್ಕದಿಂದ ಗೋಳಿಯಡ್ಕ ಮಧ್ಯೆ ವಾಹನ ಸವಾರರಿಗೆ ಸಂಚರಿಸಲು ಮತ್ತು ನಡೆದಾಡುವವರಿಗೆ ತೊಂದರೆಯಾಗಿದೆ. ಅಲ್ಲದೆ ರಸ್ತೆ ಧೂಳುಮಯವಾಗಿದೆ. ರಸ್ತೆಯ ಎರಡು ಬದಿ ಪೊದೆಗಳು ಆವರಿಸಿರುವ ಕಾರಣ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಪೈಪ್ ಹಾಕಿ ಹೊಂಡಗಳನ್ನು ಮುಚ್ಚುವ ಕಾರ್ಯ ಸಮರ್ಪಕವಾಗಿರದ ಕಾರಣ ಅನಾಹುತ ಸಂಭವಿಸುವ ಮೊದಲೇ ಇದನ್ನು ಸಂಬಂಧಪಟ್ಟವರು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.