ರಸ್ತೆ ಅಭಿವೃದ್ಧಿ ಕಾಮಗಾರಿ ಚುರುಕು

oppo_2
oppo_2
Published on

ಹನೂರು: ಪಟ್ಟಣದ ಕೇಂದ್ರ ಭಾಗದಲ್ಲಿ ಕೆ-ಶಿಪ್ ಯೋಜನೆಯಡಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಚುರುಕುಗೊಂಡಿದೆ. ಇದರಿಂದ ಸಂಚಾರ ದಟ್ಟಣೆ ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಂತಾಗಿದೆ.


ಹನೂರು ತಾಲೂಕು ಕೇಂದ್ರದ ಮೂಲಕ ಚಾಮರಾಜನಗರ ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ನಂಜನಗೂಡು ಹಾಗೂ ರಾಜ್ಯದ ಇನ್ನಿತರ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಾರೆ. ಮಹಾ ಶಿವರಾತ್ರಿ, ಯುಗಾದಿ, ದೀಪಾವಳಿ, ಮಹಾಲಯ ಅಮಾವಾಸ್ಯೆ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಇದರಿಂದ ಹನೂರು ಪಟ್ಟಣದಲ್ಲಿ ಕಿರಿದಾದ ರಸ್ತೆಯನ್ನು ಹೊಂದಿದ್ದ ಗುಪ್ತ ಮೆಡಿಕಲ್‌ನಿಂದ ತಟ್ಟೆಹಳ್ಳದವರೆಗೆ ಏಕಕಾಲದಲ್ಲಿ ಎರಡು ಬಸ್‌ಗಳು ಸಂಚರಿಸಲು ಸಾಧ್ಯವಿರಲಿಲ್ಲ. ಪರಿಣಾಮ ಆಗಾಗ್ಗೆ ಸಂಚಾರ ದಟ್ಟಣೆ ನಿರ್ಮಾಣವಾಗುತ್ತಿದ್ದು, ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಇದರಿಂದ ಭಕ್ತರು, ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ನಿಯೋಜಿಸಲ್ಪಟ್ಟ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಸುಗಮ ಸಂಚಾರಕ್ಕಾಗಿ ಹರಸಾಹಸ ಪಡಬೇಕಾಗಿತ್ತು.


5 ವರ್ಷಗಳ ಹಿಂದೆ ಕೆ-ಶಿಪ್ ಯೋಜನೆಯಡಿ 108 ಕೋಟಿ ರೂ.ವೆಚ್ಚದಲ್ಲಿ ಕೊಳ್ಳೇಗಾಲದಿಂದ ಹನೂರಿನವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಕೆಲವು ಕಾರಣಾಂತರದಿಂದ ಈ ಮಾರ್ಗದಲ್ಲಿ ಆಗಾಗ್ಗೆ ಕಾಮಗಾರಿ ಸ್ಥಗಿತಗೊಂಡು ಬಳಿಕ ಬಹುತೇಕ ಪೂರ್ಣಗೊಳಿಸಲಾಗಿತ್ತು. ಆದರೆ, ಹನೂರು ಪಟ್ಟಣದಲ್ಲಿ ಹಲವು ವರ್ಷಗಳಿಂದಲೂ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ನಾಲ್ಕೈದು ತಿಂಗಳ ಹಿಂದೆ ಪಟ್ಟಣದಲ್ಲಿ ಕಾಮಗಾರಿ ಆರಂಭಿಸಲಾಯಿತಾದರೂ ಕೆಲ ವಾಣಿಜ್ಯ ಮಳಿಗೆಗಳ ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಮಾಲೀಕರಿಂದ ತಕರಾರು ಇತ್ತು. ಈ ಹಿನ್ನೆಲೆ ತೆರವು ಕಾರ್ಯ ಸಾಧ್ಯವಾಗಿರಲಿಲ್ಲ.


ತಿಂಗಳ ಹಿಂದೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರು ಅಗತ್ಯ ಕ್ರಮವಹಿಸಿದ್ದರ ಪರಿಣಾಮ ಕಟ್ಟಡವನ್ನು ತೆರವುಗೊಳಿಸಲಾಯಿತು. ರಸ್ತೆ ವಿಸ್ತರಣೆಗೊಳಿಸಿ ಕಾಮಗಾರಿ ಆರಂಭಿಸಲಾಗಿದ್ದು, ಪ್ರಗತಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಏಕಕಾಲದಲ್ಲಿ 2 ವಾಹನಗಳು ಸುಲಭವಾಗಿ ಸಂಚರಿಸಬಹುದಾಗಿದೆ. ಹಾಗಾಗಿ ಪಟ್ಟಣದಲ್ಲಿ ಹಲವು ದಶಕದಿಂದಲೂ ನಿರ್ಮಾಣವಾಗುತ್ತಿದ್ದ ಸಂಚಾರ ದಟ್ಟಣೆ ತಪ್ಪಿದಂತಾಗಿದೆ. ಇದರಿಂದ ಪೊಲೀಸರು, ಸಾರ್ವಜನಿಕರು, ಭಕ್ತರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net