ಮರಳುಗಾರಿಕೆ ವಾಹನಗಳಿಂದ ರಸ್ತೆ ಹಾಳು: ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಂತಿ ಸಮಿತಿ ಸಭೆಯಲ್ಲಿ ಒತ್ತಾಯ

New Project (3)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಪೊಲೀಸ್ ಠಾಣೆಯಲ್ಲಿ ನೂತನ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳ ನಾಯಕರ, ಗಣ್ಯ ವ್ಯಕ್ತಿಗಳ ಶಾಂತಿ ಸಮಿತಿ ಸಭೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮಾತನಾಡಿ, ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಗ್ರಾಮೀಣ ಭಾಗದ ರಸ್ತೆ ನಾಶವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬರುವ ಮರಳು ಲಾರಿಗಳು ಹೆದ್ದಾರಿ ಟೋಲ್ ತಪ್ಪಿಸಿ ವಿಜಯಾ ಕಾಲೇಜು ರಸ್ತೆಯಿಂದ ಮಟ್ಟು ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸುತ್ತಿದ್ದು ಭಾರವಾದ ವಾಹನಗಳಿಂದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟು ಹಾಳಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆ, ಗಣಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೂಲ್ಕಿ ಬಸ್ ನಿಲ್ದಾಣ ಮದ್ಯ ವ್ಯಸನಿಗಳ ಅಡ್ಡೆಯಾಗಿದ್ದು, ಪೊಲೀಸರು ಗಸ್ತು ಬಲಪಡಿಸಿ ಪುಂಡು ಪೋಕರಿಗಳನ್ನು ನಿಯಂತ್ರಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.

ಮೂಲ್ಕಿ ಬಸ್ ನಿಲ್ದಾಣ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿಯಾಗಿದ್ದು, ಹೆದ್ದಾರಿ ಜಂಕ್ಷನ್ ಬಳಿ ಸೂಕ್ತ ಟ್ರಾಫಿಕ್ ಪೊಲೀಸ್ ಕಲ್ಪಿಸಿ ಅಪಘಾತ ನಿಯಂತ್ರಿಸಲು ಸಭೆಯಲ್ಲಿ ನಗರ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಜಾಕ್ ಒತ್ತಾಯಿಸಿದರು.

ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷಕಿ ಅನಿತಾ ನಾಗರಿಕರ ಪ್ರಶ್ನೆಗೆ ಉತ್ತರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಎಎಸ್‌ಐ ಸಂಜೀವ ಕಾರ್ಯಕ್ರಮ ನಿರೂಪಿಸಿದರು.

ಮಂಗಳಮುಖಿಯರ ಕಾಟ

ರಾಷ್ಟ್ರೀಯ ಹೆದ್ದಾರಿ ಕೋಲ್ನಾಡು ಪ್ರದೇಶದಲ್ಲಿ ಮಂಗಳಮುಖಿಯರ ಕಾಟ ವಿಪರೀತವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net