

ದೇವರದೊಡ್ಡಿ ಮಾರ್ಗದಲ್ಲಿ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ ಪೈಪ್ಲೈನ್ ಕಾಮಗಾರಿ
ಕೈಲಾಂಚ: ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಪೈಪ್ಲೈನ್ ಅಳವಡಿಕೆ ವೇಳೆ ಸೂಕ್ತ ನಿರ್ವಹಣೆ ಮಾಡದ ಕಾರಣ ದೇವರದೊಡ್ಡಿ ರಸ್ತೆಯೆಲ್ಲ ಕೆಸರುಮಯವಾಗಿದ್ದು, ವಾಹನ ಸವಾರರು ಕಿರಿ ಕಿರಿ ಅನುಭವಿಸುವಂತಾಗಿದೆ.
ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ದೇವರದೊಡ್ಡಿ ಗ್ರಾಮಕ್ಕೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ನೀರಿನ ಪೈಪ್ ಅಳವಡಿಸಲು ಅಂಜನಾಪುರದಿಂದ ರಸ್ತೆ ಪಕ್ಕದಲ್ಲಿ ಗುಂಡಿ ತೆಗೆದು ಪೈಪ್ ಅಳವಡಿಸಲಾಗುತ್ತಿದೆ. ಆದರೆ, ಮಣ್ಣನ್ನು ಸರಿಯಾಗಿ ಮುಚ್ಚದೆ ರಸ್ತೆಯಲ್ಲೇ ಬಿಟ್ಟಿರುವುದರಿಂದ ಡಾಂಬರು ರಸ್ತೆ ಕೆಸರುಮಯವಾಗಿದೆ. ನಡೆದಾಡುವವರು ಸ್ವಲ್ಪ ಯಾಮಾರಿದರೂ ಕಾಲು ಜಾರಿ ಬೀಳುವಂತಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ.
ದೇವರದೊಡ್ಡಿ ಗ್ರಾಮಕ್ಕೆ ಯಾವುದೇ ಬಸ್, ಆಟೋ ಸಂಪರ್ಕವಿಲ್ಲ. ಜನರು ಬಸ್ ಹತ್ತಲು ಅಂಜನಾಪುರ ಗ್ರಾಮಕ್ಕೆ ನಡೆದೆ ಬರಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರಿಗೆ ಕೆಸರು ರಸ್ತೆಯಲ್ಲಿ ನಡೆದಾಡುವುದೇ ದೊಡ್ಡ ಸವಾಲಾಗಿದೆ. ರಸ್ತೆಯಲ್ಲಿ ಕಾಲು ಇಟ್ಟರೆ ಎಲ್ಲಿ ಬೀಳುತ್ತೆವೆಯೋ ಎಂಬ ಚಿಂತೆ ಆವರಿಸಿಕೊಂಡಿದೆ.
ಗ್ರಾಮದಲ್ಲಿ ಬಹುತೇಕ ರೈತರು ಹೆಚ್ಚಾಗಿ ಕುರಿ ಸಾಕಣೆ ಮಾಡುವರು. ಕುರಿಗಳ ಓಡಾಟಕ್ಕೂ ಸಮಸ್ಯೆ ಉಂಟಾಗಿದೆ. ಬೆಂಗಳೂರು&ಮೈಸೂರು ರಸ್ತೆಗೆ ಸಂಪರ್ಕ ಪಡೆಯಲು ವಿಭೂತಿಕೆರೆ ಅಂಕನಾಪುರ, ಬನ್ನಿಕುಪ್ಪೆ ಗ್ರಾಮಗಳ ಜನರು ಇದೇ ರಸ್ತೆಯನ್ನು ಬಳಸಬೇಕು. ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ಕ್ರಮವಾಗಿ ಮುಗಿಸಬೇಕಲ್ಲದೆ, ಅಗೆದ ಜಾಗವನ್ನು ಮುಚ್ಚಿ ಸಂಚಾರಕ್ಕೆ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಅನಿವಾರ್ಯ.
ಅವಡಗಳಿಗೆ ಹೊಣೆ ಯಾರು? ಜನರು ಕೇಳುವುದಿಲ್ಲ ಎಂದುಕೊಂಡು ಮನಸೋಇಚ್ಛೆ ಪೈಪ್ ಅಳವಡಿಕೆ ಮಾಡಿ ಗುಂಡಿಯನ್ನು ಸರಿಯಾಗಿ ಮುಚ್ಚದೆ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹಾಕಿರುವ ಮಣ್ಣನ್ನು ತೆರವುಗೊಳಿಸದಿರುವುದು ಅವಡಕ್ಕೆ ಎಡೆಮಾಡಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಜಾರಿ ಕೈಕಾಲು, ಸೊಂಟ ಮುರಿದುಕೊಂಡರೆ ಹೊಣೆ ಯಾರು ಎಂಬುದು ಗುತ್ತಿಗೆದಾರರಿಗೆ ಇರಬೇಕಾದ ಸಾಮಾನ್ಯ ಪರಿಜ್ಞಾನ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಸರಿಪಡಿಸಬೇಕು ಎನ್ನುತ್ತಾರೆ ಗ್ರಾಮದ ರಾಜು.
ಪೈಪ್ ಅಳವಡಿಸಿದ ನಂತರ ರಸ್ತೆಯಲ್ಲಿ ಮಣ್ಣನ್ನು ಬಿಡದೆ ಸರಿಯಾಗಿ ಮುಚ್ಚಬೇಕು. ಕೆಲಸ ನಿರ್ವಹಿಸುವ ವೇಳೆ ಗುತ್ತಿಗೆದಾರರು, ಸಂಬಂಧಪಟ್ಟ ಇಂಜಿನಿಯರ್ ಸ್ಥಳದಲ್ಲೇ ನಿಂತಿದ್ದರೆ ಯಾವ ಸಮಸ್ಯೆ ಆಗುತ್ತಿರಲಿಲ್ಲ. ರಸ್ತೆಯಲ್ಲಿ ಅರ್ಧಂರ್ಬಧ ಮಣ್ಣು ಬಿಟ್ಟ ಕಾರಣ ರಸ್ತೆಯಿಡೀ ಕೆಸರುಮಯವಾಗಿ ಸಂಚಾರ ಮಾಡದಂತಹ ಸ್ಥಿತಿ ಎದುರಾಗಿದೆ. > ಬೋರಯ್ಯ, ದೇವರದೊಡ್ಡಿ. ಕೂಡಲೇ ರಸ್ತೆಗೆ ಹರಡಿರುವ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ ಜನರ ಓಡಾಟಕ್ಕೆ ಸಮಸ್ಯೆಯಾಗದಂತೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವವರಿಗೆ ತಿಳಿಸಲಾಗಿದೆ. ಇಂದೇ ಸಮಸ್ಯೆ ಬಗೆಹರಿಯಲಿದೆ. > ವೀರನಂಜೇಗೌಡ, ಎಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ರಾಮನಗರ.