

ಮಂಡ್ಯ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯೂ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೆಜ್ಜಲೆಗೆರೆ ಬಳಿ ನಡೆದಿದ್ದು, ಮಾರುತಿ ಸ್ವಿಫ್ಟ್ ಹಾಗೂ ಟಾಟಾ ಹೆಕ್ಸಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಉತ್ತರಪ್ರದೇಶ ಮೂಲದ ನೀರಜ್ ಕುಮಾರ್(50), ಅವರ ಪತ್ನಿ ಸೆಲ್ವಿ(47), ಮಂಡ್ಯ ಮೂಲದ ಕಾರು ಚಾಲಕ ನಿರಂಜನ್(35) ಎಂದು ಗುರುತಿಸಲಾಗಿದೆ. ಟಾಟಾ ಹೆಕ್ಸಾ ಕಾರಿನಲ್ಲಿದ್ದ ಪತಿ-ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಮಂಡ್ಯದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀರಜ್ ಕುಮಾರ್ ಅವರ ಪತ್ನಿ ಸೆಲ್ವಿ ಜೊತೆ ಬಾಡಿಗೆ ಕಾರು ಮಾಡಿಕೊಂಡು ಮೈಸೂರಿಗೆ ತೆರಳುತ್ತಿದ್ದರು. ಎದುರು ಬದಿಯಲ್ಲಿ ಬೆಂಗಳೂರು ಕಡೆ ಬರುತ್ತಿದ್ದ ಟಾಟಾ ಹೆಕ್ಸಾ ಕಾರು ಸೋನೆ ಮಳೆಯಿಂದ ಜಾರಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಂತರ ಎದುರು ಬದಿಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ.
ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.