ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಸ್ಪೀಡ್ ರೇಡಾರ್ ಗನ್ ಪ್ರಯೋಗ

201
Published on

ಚಳ್ಳಕೆರೆ: ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಸ್ಪೀಡ್ ರೇಡಾರ್ ಗನ್ ಬಳಸಲು ಇಲಾಖೆ ತಯಾರಿ ನಡೆಸಿದೆ ಎಂದು ಪೊಲೀಸ್ ಉಪಾಧೀಕ್ಷಕ ಟಿ.ಬಿ.ರಾಜಣ್ಣ ಹೇಳಿದರು.

ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸ್ಪೀಡ್ ರೇಡಾರ್ ಗನ್ ಪ್ರಯೋಗಿಕ ಕಾರ್ಯದಲ್ಲಿ ತೊಡಗಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ವಾಹನ ಸವಾರರು ಸಂಚಾರ ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಹೆಚ್ಚಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಇಂತಹ ದುರ್ಘಟನೆ ತಪ್ಪಿಸುವ ಉದ್ದೇಶದಿಂದ ಸ್ಪೀಡ್ ರೇಡಾರ್ ಗನ್ ಅಳವಡಿಸಲಾಗುತ್ತದೆ. ಇದು ಚಲಿಸುವ ವಾಹನಗಳ ವೇಗ ಅಳೆಯಲು ಸಹಾಯವಾಗುತ್ತದೆ ಎಂದರು.

ರೇಡಾರ್ ಗನ್ ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನದ ವೇಗ ಮತ್ತು ವಾಹನಗಳ ಸಂಖ್ಯೆ ಬಗ್ಗೆ ನಿಗಾ ವಹಿಸುತ್ತದೆ. ಇದರ ಸಹಾಯದಿಂದ ರಸ್ತೆ ನಿಯಮ ಉಲ್ಲಂಘಿಸುವ ಮತ್ತು ಹೆಲ್ಮೆಟ್ ಧರಿಸದ ವಾಹನ ಸವಾರರ ಮೇಲೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ರೇಡಾರ್ ಗನ್ ನೀಡುವ ಮಾಹಿತಿ ಆಧರಿಸಿ ತಕ್ಷಣವೇ ಆನ್‌ಲೈನ್ ಮೂಲಕ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಉಪನಿರೀಕ್ಷಕ ಆರ್. ಬಸವರಾಜ್, ಕೆ. ಸತೀಶ್‌ನಾಯ್ಕ, ಪಾಂಡುರಂಗ, ಡಿ. ಬಾಳಪ್ಪ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net