ಪರಿಹಾರ ನೀಡದ ಹೊರತು ಕಾಮಗಾರಿ ಮಾಡದಿರಿ : ಮಾಗಡಿ- ಬೆಂಗಳೂರು ಕೆಶಿಪ್ ರಸ್ತೆಗೆ ತಾವರೆಕೆರೆ ಗ್ರಾಮಸ್ಥರಿಂದ ತಡೆ

mmmm
Published on

ಮಾಗಡಿ:  ಮಾಗಡಿ- ಬೆಂಗಳೂರು ಕೆಶಿಪ್ ರಸ್ತೆಗೆ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಸಮರ್ಪಕ ಪರಿಹಾರ ನೀಡಿಲ್ಲ ಹಾಗೂ ಭೂಸ್ವಾಧೀನ ಪ್ರಕ್ರಿಯೆಯ ನೋಟಿಸ್ ಜಾರಿಗೊಳಿಸಿಲ್ಲ ಎಂದು ತಾವರೆಕೆರೆ ಗ್ರಾಮಸ್ಥರು ಮಂಗಳವಾರ ಮೇಲುಸೇತುವೆ ಕಾಮಗಾರಿ ಆರಂಭಿಸಲು ಮುಂದಾದ ಕೆಶ್ಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಭೂಮಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಸ್ತೆ ನಿರ್ಮಾಣದ ಮಾಹಿತಿ ಬಿಟ್ಟು ಹೋಗಿದೆ. ರಸ್ತೆಯನ್ನು 38 ಮೀಟರ್ ವಿಸ್ತರಣೆಗೆ ಸ್ವಾಧೀನ ಮಾಡಿಕೊಂಡಿರುವ ಜಮೀನು ಮತ್ತು ಕಟ್ಟಡಗಳ ಬಗ್ಗೆ ಸಮರ್ಪಕವಾಗಿ ಸರ್ವೇ ಮಾಡಿಲ್ಲ. ಆದ್ದರಿಂದ ಮರುಸರ್ವೇ ಮಾಡಿ ಕಾಮಗಾರಿ ನಡೆಸಿ ಎಂದು ಒತ್ತಾಯಿಸಿದರು.

ತಾವರೆಕೆರೆ ವೃತ್ತದಿಂದಲೇ ಕಾಮಗಾರಿ ಪ್ರಾರಂಭಿಸಬೇಕು. ಸುತ್ತಮುತ್ತ ರಸ್ತೆ ಪಥದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲವಾದ್ದರಿಂದ ಕಾಮಗಾರಿ ಮಾಡಲು ಬಿಡುವುದಿಲ್ಲ. ಯಂತ್ರೋಪಕರಣ ಮತ್ತು ವಾಹನ ತೆಗೆದುಕೊಂಡು ಹೋಗಿ ಎಂದು ಆಗ್ರಹಿಸಿದರು.

ಗ್ರಾಮಸ್ಥರು ಮತ್ತು ಕೆಶಿಪ್ ಅಧಿಕಾರಿಗಳು ಮೇಲುಸೇತುವೆ ನಿರ್ಮಾಣದ ಬಗ್ಗೆ ಈಗಾಗಲೇ ಎರಡು ಭಾರಿ ಸಭೆ ನಡೆಸಿದ್ದು, ಸಭೆ ನಿರ್ಣಯದಂತೆ 1.3 ಕಿಮೀ ಪಥಕ್ಕೆ ಫ್ಲೈ ಓವರ್ ನಿರ್ಮಿಸಲು ಕ್ರಮಬದ್ಧವಾದ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡು ರಸ್ತೆ ವಿಸ್ತರಣೆಗೆ ನಿರ್ಧರಿಸಲಾಗಿತ್ತು. ಆದರೆ ಸಭೆಯ ನಿರ್ಣಯಗಳಂತೆ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಸ್ವಾಧೀನ ಭೂಮಿಗೆ ಪರಿಹಾರ ಹಣವನ್ನು ಫಲಾನುಭವಿಗಳಿಗೆ ನೀಡದೆ ಫ್ಲೈ ಓವರ್ ಕಾಮಗಾರಿ ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತಡೆದರು.

ಕೆಶಿಪ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಸುನೀಲ್ ಕುಮಾರ್ ಮಾತನಾಡಿ, ಕೆಶಿಪ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿರುವ ಸಮರ್ಪಕ ದಾಖಲೆ ಹೊಂದಿರುವ ಫಲಾನುಭವಿಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಮತ್ತಷ್ಟು ಗ್ರಾಮಸ್ಥರ ಭೂ ದಾಖಲೆಗಳು ಸಮರ್ಪಕವಾಗಿ ಇಲ್ಲದ ಕಾರಣ ಅವರವರ ಹೆಸರಿನಲ್ಲಿ ಇರುವ ಭೂಮಿಯ ಭೂಸ್ವಾಧೀನದ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಡಿಪಾಸಿಟ್ ಮಾಡಲಾಗಿದೆ. ಸಮರ್ಪಕವಾದ ದಾಖಲೆ ನೀಡಿ ಆ ಪರಿಹಾರ ಹಣವನ್ನು ನ್ಯಾಯಾಲಯದ ಮೂಲಕ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.

ಗುತ್ತಿಗೆದಾರ ಕೆ.ವಿ. ಬಸವರಾಜು, ಕಟ್ಟಾ ವೆಂಕಟೇಶ್ವರಲು, ವಿಜಯ ಕುಮಾರ್, ಮಲ್ಲಿಕಾರ್ಜುನ್, ಗ್ರಾಮಸ್ಥರಾದ ವೆಂಕಟೇಶ್, ಚಂದ್ರಶೇಖರ್, ಜಯಕುಮಾರ್, ವೆಂಕಟೇಶ್, ದರ್ಶನ್, ಗೋವಿಂದರಾಜು, ದಿನೇಶ್, ಮೂರ್ತಿ, ಶಂಕರೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net