ಬನ್ನಗಿರಿ- ಕನಕಪುರ ಮಾರ್ಗದಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ಸಂಚಾರಕ್ಕೆ ತೊಡಕು

BB
Published on

ಬಿಡದಿ: ಬನ್ನಗಿರಿಯಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಬನ್ನಗಿರಿಯಿಂದ ಹೊಸೂರು ಗೊಲ್ಲಹಳ್ಳಿ, ಕೋಡಿಪಾಳ್ಯ, ನಂಜೇಗೌಡನದೊಡ್ಡಿ, ಹೊಸೂರು, ಗುಂಡುತೋಪು ಮಾರ್ಗವಾಗಿ ಕನಕಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದು, ಡಾಂಬರ್ ಕಿತ್ತು ಸಂಪೂರ್ಣ ಗುಂಡಿಮಯವಾಗಿದೆ. ರಸ್ತೆಗೆ ಹಿಂದೆ ಡಾಂಬಾರು ಹಾಕಲಾಗಿತ್ತೆಂಬ ಒಂದು ಸಣ್ಣ ಕುರುಹು ಸಿಗದ ಮಟ್ಟಿಗೆ ಅಧ್ವಾನಗೊಂಡಿದೆ. ಈಗ ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆಯ ಗುಂಡಿಗಳು ಸಣ್ಣ ಕೆರೆಗಳನ್ನು ಮೀರಿಸುವಂತಿವೆ.

ಈ ರಸ್ತೆಯಲ್ಲಿ ಶಾಲಾ ವಾಹನ ಜತೆಗೆ ಬಿಎಂಟಿಸಿ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋಗಳು ಸಂಚರಿಸುತ್ತಿದ್ದು, ಗುಂಡಿಗಳಿಂದ ಪ್ರಯಾಣಿಕರು, ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಬನ್ನಗಿರಿ- ಕನಕಪುರ ಮುಖ್ಯ ರಸ್ತೆಯ ದುಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಎಲ್ಲೆಡೆ ಗುಂಡಿಗಳು, ಮಳೆ ಬಂದರೆ ಗದ್ದೆಯಂತಾಗುತ್ತಿರುವ ನೆಲದ ಮೇಲೆ ವಾಹನ ಓಡಿಸುವುದು ಚಾಲಕರಿಗೆಸವಾಲಾಗಿದೆ. ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿಕೊಳ್ಳುತ್ತವೆ. ರಸ್ತೆಯೋ ಹಳ್ಳವೋ, ಕೆರೆಯೋ ಎಂಬುದು ಜನರಿಗೆ ತಿಳಿಯದಂತಾಗಿದೆ.

ಭಾರಿ ಮಳೆಗೆ ಸಿದ್ಧತೆ ಎಂಬ ಹೆಸರಿನಲ್ಲಿ ಬಿಲ್ಲು : ಗುಂಡಿ ಬಿದ್ದ ರಸ್ತೆಗಳ ಕಾರಣದಿಂದಾಗಿ ಸಮಸ್ಯೆ ಎದುರಾಗುತ್ತಿವೆ. ಕೆಲಸಕ್ಕೆ ತಡ, ಶಾಲೆಗಳಿಗೆ ತಡ, ಅಕ್ಕಪಕ್ಕದ ಆಸ್ಪತ್ರೆಗೆ ತಕ್ಷಣದ ಪ್ರವೇಶಕ್ಕಾಗಿ ಹೋಗುವ ಸಂದರ್ಭಗಳಲ್ಲಿಯೂ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಜನರಲ್ಲಿ ನಿರಾಸೆ ಹುಟ್ಟಿಸುತ್ತಿದೆ. ಭಾರಿ ಮಳೆಗೆ ಸಿದ್ಧತೆ ಎಂಬ ಹೆಸರಿನಲ್ಲಿ ಬಿಲ್ ಗಳಿಕೆ ಜೋರಾಗಿರುತ್ತದೆಯಾದರೂ, ಕಾಮಗಾರಿ ನಡೆಯದಿರುವುದು ದುರಂತ.

ಸಿಗಬೇಕಿದೆ ಮುಕ್ತಿ: ಗುಂಡಿಮಯವಾಗಿರುವ ಇಂತಹ ರಸ್ತೆಗಳ ದುರಸ್ತಿ ಕಾರ್ಯವಾಗಬೇಕಿದೆ. ಗುಂಡಿಗಳನ್ನು ಮುಚ್ಚುವ ಕೆಲಸವಾಗದೆ, ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯವಾಗಬೇಕಿದೆ. ಆ ಮೂಲಕ ಸಾರ್ವಜನಿಕರ ಸಂಕಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net