ತುಂಬಿ ಹರಿಯುತ್ತಿರುವ ನದಿಗಳು

26 skp 1
Published on

ಸಕಲೇಶಪುರ: ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಜನರು ಮನೆಬಿಟ್ಟು ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ತಾಲೂಕಿನಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದ್ದು ಹೇಮಾವತಿ ನದಿ ಪಟ್ಟಣದಲ್ಲಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಪಟ್ಟಣದ ಆಜಾದ್ ರಸ್ತೆ ಜಲಾವೃತ್ತಗೊಂಡಿದೆ. ತಾಲೂಕು ಆಡಳಿತ ಸ್ಥಳೀಯರನ್ನು ಅಂಬೇಡ್ಕರ್ ಭವನದಲ್ಲಿ ತೆರೆದಿರುವ ಸಾಂತ್ವನ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದೆ.


ಹೇಮಾವತಿ ನದಿ ನೀರು ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದೆ. ಹೆಬ್ಬಸಾಲೆ ಗ್ರಾಮ ಸಮೀಪ ಹೇಮಾವತಿ ನದಿ ಉಕ್ಕಿಹರಿದ ಪರಿಣಾಮ ಹೆನ್ನಲಿ ಹಾಗೂ ಹೆಬ್ಬಸಾಲೆ ಗ್ರಾಮಗಳ ಸಂಚಾರ ಗುರುವಾರದಿಂದಲೇ ಬಂದ್ ಆಗಿದೆ. ಪಟ್ಟಣದಲ್ಲಿ 13 ಅಡಿಯಷ್ಟು ನದಿ ನೀರು ಹರಿಯುತ್ತಿದೆ. ಜಾನೇಕೆರೆಹಳ್ಳ ಸಹ ಸಮೀಪದ ಭತ್ತದ ಗದ್ದೆಗಳಿಗೆ ಅವರಿಸಿದ್ದರೆ, ಕುಂಟಹಳ್ಳಿ ಹೊಳೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಕುಂಟಹಳ್ಳಿ-ಹೊಡಚಹಳ್ಳಿ ರಸ್ತೆ ಮುಳುಗಡೆಯಾಗಿದೆ. ಪಾಲಹಳ್ಳಿ ಹೊಳೆ ನೀರು ನೂರಾರು ಎಕರೆ ಭತ್ತದ ಗದ್ದೆಗಳನ್ನು ಜಲಾವೃತಗೊಳಿಸಿದೆ. ಐಗೂರು ಹೊಳೆ ಉಕ್ಕಿ ಹರಿಯುತ್ತಿದೆ. ಭತ್ತದ ಗದ್ದೆಗಳು ಕೆರೆಗಳಂತಾಗಿವೆ.

ತಾಲೂಕಿನ ಅಲುವಳ್ಳಿ ಗ್ರಾಮದ ಶಾಲಾ ಕಟ್ಟಡ ಕುಸಿಯುವ ಹಂತ ತಲುಪಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಹೊಸಹಳ್ಳಿ ಗ್ರಾಮದ ಧರ್ಮೇಗೌಡ ಅವರ ಮನೆ ಹಾನಿಗೊಂಡಿದೆ. ಆದರಗೆರೆ ಗ್ರಾಮದ ಜಗದೀಶ್ ಅವರ ಕೊಟ್ಟಿಗೆ ಕುಸಿದು ಕರು ಗಾಯಗೊಂಡಿದೆ. ಹೊಸೊರು ಗ್ರಾಮದ ಆಸ್ಪತ್ರೆ ಕಾಂಪೌಂಡ್ ಕುಸಿದಿದೆ. ಯಡಕೇರಿ ಗ್ರಾಮದ ನಾಗರಾಜ್ ಮನೆ ಭಾಗಶಃ ಹಾನಿಗೊಂಡಿದೆ. ಹಾನುಬಾಳ್ ಹಾಗೂ ಹೆಬ್ಬನಹಳ್ಳಿ ಗ್ರಾಮದ ಶಾಲಾ ಕೊಠಡಿಗಳು ಹಾನಿಗೊಂಡಿವೆ. ತಾಲೂಕಿನಲ್ಲಿ ಈವರೆಗೆ 58 ಮನೆಗಳು, 13 ಕೊಟ್ಟಿಗೆಗಳು ಹಾಗೂ ನಾಲ್ಕು ಶಾಲೆಗಳು ಹಾನಿಗೊಂಡಿವೆ.

ರಸ್ತೆ ಸಂಪರ್ಕ ಬಂದ್
ಪಟ್ಟಣದಿಂದ ನಡಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿದ್ದು ರಸ್ತೆ ಅಪಾಯದ ಸ್ಥಿತಿ ತಲುಪಿದೆ. ಹಾಗಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪರಿಣಾಮ ನಡಹಳ್ಳಿ, ಮಲ್ಲೆಗದ್ದೆ, ದೇಖ್ಲಾ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಮಣ್ಣು ಕುಸಿದು ರಸ್ತೆ ಹಾಳಾಗಲು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಉಪವಿಭಾಗಾಧಿಕಾರಿ ಶ್ರುತಿ ಅವರಿಗೆ ಮನವಿ ಸಲ್ಲಿಸಿದರು.

ಹೆತ್ತೂರು ಗ್ರಾಮದ ಸಮೀಪ ರಾಜ್ಯಹೆದ್ದಾರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಸಕಲೇಶಪುರ-ಹೆತ್ತೂರು ನಡುವಿನ ಸಂಚಾರ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಪಟ್ಟಣ ಹಾಗೂ ಬ್ಯಾಕರವಳ್ಳಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 107ರ ಬಾಗರವಳ್ಳಿ ಗ್ರಾಮ ಸಮೀಪ ರಸ್ತೆ ಬದಿ ಭೂಮಿ ಕುಸಿದು ಅಪಾಯದ ಸ್ಥಿತಿ ತಲುಪಿದೆ.

ಶುಂಠಿ ಬೆಳೆನಾಶ:
ತಾಲೂಕಿನ ಹಲವೆಡೆ 210 ಹೇಕ್ಟರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು ಮಳೆಗೆ ಕೊಳೆರೋಗ ಆವರಿಸಿದೆ. ಈಗಾಗಲೇ ತಾಲೂಕಿನ ಬಹುತೇಕ ಕಾಫಿತೋಟಗಳಲ್ಲಿ ಕೊಳೆ ರೋಗ ಕಾಡುತ್ತಿದ್ದು ಪ್ರತಿ ಕಾಫಿ ಗಿಡದ ಬುಡದಲ್ಲಿ ಹತ್ತಾರು ಕೆಜಿ ಕಾಫಿ ನೆಲ ಸೇರಿದೆ. ಮಳೆ ಹೀಗೆ ಮುಂದುವರಿದರೆ ಅಡಕೆ, ಮೆಣಸಿಗೂ ಕೊಳೆ ರೋಗ ಹರಡುವುದು ನಿಶ್ಚಿತ. ತಾಲೂಕಿನ ಹೆತ್ತೂರು, ಹಾನುಬಾಳ್ ಹೋಬಳಿಯಲ್ಲಿ 150 ಇಂಚು (3,500 ಮಿ.ಮೀಟರ್) ಮಳೆಯಾಗಿದ್ದು ಈ ಭಾಗದಲ್ಲಿ ಕಾಫಿ ಗಿಡದ ಎಲೆಗಳು ಉದುರುತ್ತಿದ್ದು ಬೆಳೆಗಾರರು ಮಳೆ ನಿಂತರೆ ಸಾಕು ಎನ್ನುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net