'ಅಡ್ಡ'ಪರಿಣಾಮದ ಅತಿರೇಕ: ಮಾಜಿ ಸಿಎಂ-ಶಾಸಕರ ಬೆಂಬಲಿಗರ ಮಧ್ಯೆ ಇಂದು ದ್ವೇಷಜ್ವಾಲೆ!

HDK
Published on

ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಚಲಾಯಿಸಿದ್ದರಿಂದ ಉಂಟಾಗಿರುವ ಅಡ್ಡಪರಿಣಾಮ ಅತಿರೇಕಕ್ಕೆ ಹೋಗಿದ್ದು, ಮಾಜಿ ಸಿಎಂ ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಇಂದು ದ್ವೇಷ ಜ್ವಾಲೆಯಾಗಿ ಹೊರಹೊಮ್ಮಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ಶಾಸಕ, ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದರಿಂದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು. ಅದನ್ನು ವಿರೋಧಿಸಿ ಏಕವಚನದಲ್ಲೇ ಸವಾಲೊಡ್ಡುವಂತೆ ಶ್ರೀನಿವಾಸ್ ಮಾತನಾಡಿದ್ದು, ಎರಡೂ ಕಡೆಯವರ ಬೆಂಬಲಿಗರನ್ನು ರೊಚ್ಚಿಗೆಬ್ಬಿಸಿತ್ತು.

ಇದು ಮೊದಲು ಎಚ್​ಡಿಕೆ ಬೆಂಬಲಿಗರು ಶ್ರೀನಿವಾಸ್ ತಿಥಿಯ ಆಹ್ವಾನ ಪತ್ರಿಕೆ ಮಾಡಿ ಹಂಚಿದ್ದು, ಬಳಿಕ ಶ್ರೀನಿವಾಸ್ ಬೆಂಬಲಿಗರೂ ಎಚ್​ಡಿಕೆ ಕೈಲಾಸ ಸಮಾರಾಧನೆಯ ಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

ಇಂದು ಇದು ಮತ್ತೊಂದು ಹಂತಕ್ಕೆ ತಲುಪಿದ್ದು, ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಕುಮಾರಸ್ವಾಮಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಭ್ರಷ್ಟ ಕುಮಾರಸ್ವಾಮಿ, ನಯವಂಚಕ ಕುಮಾರಸ್ವಾಮಿ, ಊಸರವಳ್ಳಿ ಕುಮಾರಸ್ವಾಮಿ ಎಂದು ಧಿಕ್ಕಾರ ಕೂಗಿದ್ದಲ್ಲದೆ ಕುಮಾರಸ್ವಾಮಿ ಪ್ರತಿಕೃತಿಗೆ ಬೆಂಕಿ ಹಚ್ಚಿ, ಸತ್ತ ಸತ್ತ ಕುಮಾರಸ್ವಾಮಿ ಸತ್ತ ಎಂದು ಶ್ರೀನಿವಾಸ್ ಬೆಂಬಲಿಗರು ದ್ವೇಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net