

ಹರಿಹರ: ಧರ್ಮಾಚರಣೆ ನಿರ್ಲಕ್ಷ್ಯ ಮಾಡಿದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಜಗದ್ಗುರು ರೇಣುಕಾಚಾರ್ಯ ಸಭಾಭವನದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ನಂತರ ಆಶೀರ್ವಚನ ನೀಡಿದರು.
ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ನೀತಿ ನಿಯಮ ಇಲ್ಲದ ಸಮಾಜವನ್ನು ಬೆಳೆಯಲಾಗದು. ಸತ್ಯ ಶುದ್ಧವಾದ ಧರ್ಮ ಪರಿಪಾಲನೆಯನ್ನು ಎಲ್ಲರೂ ತಪ್ಪದೇ ಮಾಡಬೇಕು ಎಂದರು.
ಇಂದಿನ ಯುವ ಪೀಳಿಗೆಯು ನಮ್ಮ ಆಚಾರ, ಪದ್ಧತಿ ಮತ್ತು ಪರಂಪರೆಯ ಆಚರಣೆಯಿಂದ ವಿಮುಖರಾಗುತ್ತಿದ್ದಾರೆ. ಅವರಿಗೆ ನಮ್ಮ ಧರ್ಮ ಮತ್ತು ಆದರ ಪರಿಕಲ್ಪನೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಭೌತಿಕ ಜೀವನ ಸಮೃದ್ಧಗೊಂಡರೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸಿಕೊಳ್ಳಲು ವೀರಶೈವ ಧರ್ಮ ಒತ್ತಿ ಹೇಳುತ್ತದೆ. ಜೀವನ ವಿಕಾಸಕ್ಕಾಗಿ ಧಾರ್ಮಿಕ ಮೌಲ್ಯಗಳ ಪರಿಪಾಲನೆ ಮಾಡುವ ಅವಶ್ಯಕತೆಯಿದೆ ಎಂದರು.
ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ದೊರಕುತ್ತದೆ. ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಪೂಜಾರಾಧನೆಯೊಂದಿಗೆ ಜೀವನ ಸಾಕ್ಷಾತ್ಕಾರ ಮಾಡಿಕೊಳ್ಳುವ ಅಗತ್ಯ ಬಹಳಷ್ಟಿದೆ. ಆಸಕ್ತಿ ಶ್ರದ್ಧೆವುಳ್ಳವರೆಲ್ಲರೂ ಗುರುವಿನ ಮೂಲಕ ಇಷ್ಟಲಿಂಗವನ್ನು ಪಡೆದು, ಶಿವ ಪಂಚಾಕ್ಷರಿ ಮಂತ್ರ ಜಪಿಸಿ ಜೀವನ ಸಾರ್ಥಕಪಡಿಸಿಕೊಳ್ಳಬಹುದು ಎಂದರು.
ಮಣಕೂರು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಹಾಗೂ ಹರಿಹರ ವಿಶ್ವನಾಥ ಶಾಸ್ತ್ರಿಗಳು ವೀರಶೈವ ಧರ್ಮ ಸಂಸ್ಕೃತಿಯ ಬಗ್ಗೆ ಬೋಧನೆ ಮಾಡಿದರು. ಲಕ್ಷ್ಮೇಶ್ವರದ ಕರೆವಾಡಿ ಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಇದೇ ವೇಳೆ ಇಷ್ಟಲಿಂಗ ಮಹಾಪೂಜೆ ಮತ್ತು ಧಾರ್ಮಿಕ ಸಭೆಗಳ ಯಶಸ್ವಿಗೆ ಕಾರಣೀಕರ್ತರಾದ ನಗರದ ರೇಣುಕಾ ಮಂದಿರದ ದೇವಸ್ಥಾನ ಸಮಿತಿ ಕಾರ್ಯಾಧ್ಯಕ್ಷ ಜುಂಜಪ್ಪ ಹೆಗ್ಗಪ್ಪನವರ, ಕಾರ್ಯದರ್ಶಿ ಕೊಂಡಜ್ಜಿ ಪಂಚಾಕ್ಷರಿ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರನ್ನು ಆಶೀರ್ವದಿಸಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ತಾಪಂ ಮಾಜಿ ಸದಸ್ಯ ಹಾಲೇಶಗೌಡ, ದೇವಸ್ಥಾನ ಸಮಿತಿಯ ಸಮಾಳದ ಎಚ್. ಚಂದ್ರಶೇಖರ್, ಸಿದ್ದಲಿಂಗಸ್ವಾಮಿ, ಎನ್.ಇ. ಸುರೇಶ್, ಟಿ.ಜೆ. ಮುರುಗೇಶಪ್ಪ, ಪ್ರಕಾಶ್ ಮಸಲವಾಡ, ರಾಚಪ್ಪ, ಕುಮಾರಸ್ವಾಮಿ, ವಜ್ರೇಶ್, ವೀರಭದ್ರಯ್ಯ, ಸಿದ್ದಯ್ಯ, ಹಾಲಸ್ವಾಮಿ, ರೇಣುಕಸ್ವಾಮಿ, ವೀರೇಂದ್ರ, ರುದ್ರಮುನಿ, ವಿಶಾಲಾಮ್ಮ, ಸಾವಿತ್ರಮ್ಮ, ಪುಷ್ಪಲತಾ ಇತರರಿದ್ದರು.