ರೈತ ಸಂಘ ಕಾರ್ಯಕರ್ತರ ಧರಣಿ

5-kollegal-1
Published on

ಕೊಳ್ಳೇಗಾಲ: ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಕಬಿನಿ ನಾಲಾ ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಿದರು.


ತಾಲೂಕು ರೈತ ಸಂಘದ ಅಧ್ಯಕ್ಷ ಶಿವಮಲ್ಲು ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾಗಿದೆ. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಹಲವು ಗ್ರಾಮಗಳು ಮುಳುಗಡೆಗೊಂಡಿವೆ. ಆದರೆ, ಕೆರೆಗಳು ಮಾತ್ರ ತುಂಬಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ನೀರು ಭರ್ತಿ ಮಾಡಿಸದೆ ರೈತರನ್ನು ವಂಚಿಸುತ್ತಿದ್ದಾರೆ. ಜು.10 ರಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಈ ವೇಳೆ ನೀರು ತುಂಬಿಸುವಂತೆ ಭರವಸೆ ನೀಡಿದ್ದರು. ಆದರೆ, ಮಾತಿನಂತೆ ನಡೆದು ಕೊಂಡಿಲ್ಲ. ಈ ಕಾರಣ ಪ್ರತಿಭಟನೆ ಕೈಗೊಂಡಿದ್ದೇವೆ. ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲಿಸುವುದಿಲ ಎಂದರು.


ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಪ್ರಭಾರ ಇಇ ರಮೇಶ್ ಆಗಮಿಸಿ, ಈಗಾಗಲೇ ಚಿಕ್ಕರಂಗನಾಥ ಕೆರೆ, ದೊಡ್ಡಕೆರೆ, ಪಾಪನ ಕೆರೆಗಳಿಗೆ ನೀರು ಬಿಡಲಾಗಿದೆ. ಉಗನಿಯ ಹಾಗೂ ಧನಗೆರೆ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.


ತಾಲೂಕು ರೈತ ಸಂಘ ಉಪಾಧ್ಯಕ್ಷ ಚಾರ್ಲಿ, ಪ್ರಧಾನ ಕಾರ್ಯದರ್ಶಿ ಪೆರಿಯಾ ನಾಯಗಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸತ್ತೇಗಾಲ ಅಧ್ಯಕ್ಷ ಮಹದೇವ, ದೊಂಡ್ಡಿಂದುವಾಡಿ ಅಧ್ಯಕ್ಷ ವಸಂತಕುಮಾರ್, ನೀಲಮ್ಮ, ಬೆಂಡರಹಳ್ಳಿ ರಾಜಣ್ಣ, ಪುಟ್ಟೇಗೌಡ, ಮಸಣಶೆಟ್ಟಿ, ರಾಮೇಗೌಡ, ಜೈರಾಜು, ಶಶಿಕಲಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net