ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ

26 CRP-1A
Published on

ಚನ್ನರಾಯಪಟ್ಟಣ: ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು. ಸಂಸ್ಕೃತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಠದ ಹಾಸನ ಮತ್ತು ಕೊಡಗು ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.


ಪಟ್ಟಣದ ಬಿಜಿಎಸ್ ಕನ್ವೆನ್ಷನ್ ಹಾಲ್ನಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚನ್ನರಾಯಪಟ್ಟಣ, ಅಣತಿ, ಕಬ್ಬಳಿ, ಬಿಜಿಎಸ್ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜ್ಞಾನಾಂಕುರ, ಅಕ್ಷರಾಭ್ಯಾಸ, ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಮಕ್ಕಳಿಗೆ ಅಕ್ಷರದೊಂದಿಗೆ ಹುಟ್ಟಿನಿಂದಲೇ ಸಂಸ್ಕಾರವನ್ನು ಕಲಿಸಿದರೆ ಮುಂದೆ ಅವರು ದೊಡ್ಡವರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಪ್ರಾಥಮಿಕ ಹಂತದಿಂದಲೇ ಸಮಾಜದಲ್ಲಿ ಸರಿದಾರಿಯಲ್ಲಿ ನಡೆದುಕೊಳ್ಳಲು ಶಿಕ್ಷಣ ಮುಖ್ಯ ಪ್ರೇರಣೆಯಾಗಿರಲಿದೆ ಎಂದರು.


ವಿದ್ಯೆಯ ಆರಂಭವೇ ಒಂದು ಉತ್ತಮ ಸಂಸ್ಕಾರ. ಭಾರತ ಶ್ರೀಮಂತ, ಸಾಂಸ್ಕೃತಿಕ, ಗುರು ಪರಂಪರೆಯ ಹೆಗ್ಗಳಿಕೆಗೆ ಒಳಪಡುತ್ತದೆ. ಪ್ರಾಚೀನ ಕಾಲದಿಂದಲೂ ಶಿಕ್ಷಣದ ಕ್ಷೇತ್ರದಲ್ಲಿ ಶ್ರೀಮಂತವಾಗಿತ್ತು. ಆದ್ದರಿಂದ ಅವರ ಬೆಳವಣಿಗೆ ಮತ್ತು ಬುದ್ಧಿ ತಿಳಿಸುವ ಮುಂಚೆಯೇ ಅಕ್ಷರಾಭ್ಯಾಸ ಪ್ರಾರಂಭಿಸುವುದು ಉತ್ತಮವಾದ ಬೆಳವಣಿಗೆ. ಪಾಲಕರು ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ, ನಾಗರಿಕತೆ, ಆಚಾರ-ವಿಚಾರಗಳನ್ನು ಕಲಿಸಬೇಕಿದೆ. ಆ ನಿಟ್ಟಿನಲ್ಲಿ ಬಿಜಿಎಸ್ ಮಠದ ಶಾಲೆಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.


ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಬಾಗಲಕೋಟೆ ಅನವಾಲ ಪೂರ್ಣಾನಂದ ಆಶ್ರಮದ ಶ್ರೀ ಕೈಲಾಸನಂದನಾಥ ಸ್ವಾಮೀಜಿ, ಕಬ್ಬಳಿಯ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸಿ.ಸಿ.ಕುಮಾರ್, ತಿಮ್ಮೇಗೌಡ, ಭಾರತಿ, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net