ನೋಂದಣಿಗೆ ಮುಗಿಬಿದ್ದ ರೈತರು

04arsph1ep,,,,
????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಅರಸೀಕೆರೆ: ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗೆ ಸೋಮವಾರದಿಂದ ಮರು ನೋಂದಣಿ ಪ್ರಕ್ರಿಯೆ ಆರಂಭಿಸಿದ್ದು ಎಪಿಎಂಸಿ ಪ್ರಾಂಗಣದಲ್ಲಿ ರೈತರು ಜಮಾಯಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


ಪ್ರಕ್ರಿಯೆ ಅರಂಭಗೊಳ್ಳುತ್ತಿದ್ದಂತೆ ನೋಂದಣಿಗೆ ರೈತರು ಮುಗಿಬಿದ್ದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಕರಗಳನ್ನು ಕೊಂಡ್ಯೋಯ್ದರು. ಮತ್ತೆ ಕೆಲವರು ಎಪಿಎಂಸಿ ಕಚೇರಿ ಮುಂಭಾಗ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಸಿದ್ದರಂಗಸ್ವಾಮಿ ಮಹಿಳೆಯರಿಗೆ ಪ್ರತ್ಯೇಕ ಕೇಂದ್ರ ಸೇರಿದಂತೆ ಇನ್ನೆರಡು ಹೆಚ್ಚುವರಿ ನೋಂದಣಿ ಕೌಂಟರ್ ತೆರೆಯಲು ಅವಕಾಶ ಮಾಡಿಕೊಡುವುದಾಗಿ ಎಲ್ಲರನ್ನೂ ಸಮಾಧಾನಪಡಿಸಿದರು.


ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತಭವನದ ಕಚೇರಿ ಬಳಿ ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಸಾಲಿನಲ್ಲಿ ಸಾಲುಗಟ್ಟಿ ನಿಂತಿದ್ದರು. ಬಾಣಾವರ, ಜಾವಗಲ್, ಜೆ.ಸಿ.ಪುರ ಹಾಗೂ ಗಂಡಸಿ ಉಪಪ್ರಾಂಗಣದ ಆವರಣದಲ್ಲಿ ಭಾನುವಾರ ರಾತ್ರಿಯಿಂದಲೇ ರೈತರು ಕಾದು ಕುಳಿತ್ತಿದ್ದರು. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರೂ. ಹಾಗೂ ರಾಜ್ಯ ಸರ್ಕಾರ ಒಂದೂವರೆ ಸಾವಿರ ರೂ. ಪ್ರೋತ್ಸಾಹ ಧನ ನೀಡಿ (13,500 ರೂ.) ಕೊಬ್ಬರಿ ಖರೀದಿಸಲು ನಿರ್ಧರಿಸಿದೆ. ಹಿಂದೆ ನೋಂದಣಿ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರಿಂದ ಸರ್ಕಾರ ಎಲ್ಲ ಪ್ರಕ್ರಿಯೆ ರದ್ದುಗೊಳಿಸಿ ಮರು ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ.


ಕೆಲ ಪ್ರಭಾವಿ ವರ್ತಕರು ರೈತರನ್ನು ಮುಂದಿಟ್ಟುಕೊಂಡು ದಾಸ್ತಾನು ಮಾಡಿಟ್ಟುಕೊಂಡಿರುವ ಕೊಬ್ಬರಿ ಮಾರಾಟ ಮಾಡಲು ಹುನ್ನಾರ ನಡೆಸಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ರೈತರು ಎಪಿಎಂಸಿ ಕಚೇರಿ ಬಳಿ ಆಕ್ರೋಶ ಹೊರಹಾಕಿದರು. ಮುಂಜಾಗ್ರತಾ ಕ್ರಮವಾಗಿ ಎಲ್ಲ ನೋಂದಣಿ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net