ಚನ್ನಪಟ್ಟಣದಲ್ಲಿ ರೈಸ್ ಪುಲ್ಲಿಂಗ್ ದಂಧೆ ಸದ್ದು?...

Rice pulling
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನಾದ್ಯಂತ 4 ಲಕ್ಷ ಕೋಟಿಯದ್ದೇ ಮಾತು. ಪುರಾತನ ವಸ್ತು ಮಾರಾಟ ಮಾಡಿದ ಪ್ರತಿಯಾಗಿ ಕೆನಡಾ ಕಂಪನಿಯೊಂದು ಯುವತಿಯೊಬ್ಬಳ ಖಾತೆಗೆ 4 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿರುವ ಬಗ್ಗೆಯೇ ಗುಸುಗುಸು. ಪ್ರಾಚಿನ ವಸ್ತು ಮಾರಾಟದ ಒಪ್ಪಂದದ ಪತ್ರ, ಬ್ಯಾಂಕ್​ ಖಾತೆಯಲ್ಲಿರುವ 4 ಲಕ್ಷ ಕೋಟಿ ದುಡ್ಡಿನ ದಾಖಲೆ ಪತ್ರಗಳು ಎನ್ನಲಾದ ದಾಖಲಾತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಇಷ್ಟೆಲ್ಲ ಚರ್ಚೆಗೆ ಆಸ್ಪದವಾಗಿದೆ.

ಚನ್ನಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿರುವ ಯುವತಿಯ ಬ್ಯಾಂಕ್​ ಖಾತೆಗೆ 4 ಲಕ್ಷ ಕೋಟಿ ರೂ. ಜಮೆಯಾಗಿರುವ ದಾಖಲಾತಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈಕೆಯ ಖಾತೆಗೆ ಲಕ್ಷ ಲಕ್ಷ  ಕೋಟಿ ಹಣ ಬಂದಿರುವ ಹಿಂದೆ ರೋಚಕ ಕಥೆ ಇದೆ. ಈಕೆಗೆ ಸಿಕ್ಕಿದೆ ಎನ್ನಲಾದ ಬಲು ಪುರಾತನ ವಸ್ತು (ಆ್ಯಂಟಿಕ್​ ಪೀಸ್​) ಖರೀದಿಸಿರುವ ಕೆನಡಾ ಮೂಲದ ಕಂಪನಿಯೊಂದು ಆ ವಸ್ತುವಿನ ಬೆಲೆಯನ್ನು ಈಕೆಗೆ ವರ್ಗಾಯಿಸಿದೆ ಎನ್ನುವ ಮಾಹಿತಿ ಈ ದಾಖಲೆಯಲ್ಲಿ ಲಭ್ಯವಿದೆ.

ಯುವತಿಯ ಬಳಿ ಇತ್ತು ಎನ್ನಲಾದ 680 ವರ್ಷ ಹಳೆಯದಾದ ಬಹು ಅಮೂಲ್ಯವಾದ ತಾಮ್ರದ ಹೂ ಕುಂಡ ವನ್ನು ಕೆನಡಾ ಮೂಲದ ಜಿಂಕ್​ ಮೆಟಲ್​ ಕಾಪೋರ್ರೇಷನ್​ ಎಂಬ ಸಂಸ್ಥೆ ಖರೀದಿಸಿದ್ದು, 8.5 ಕೆ.ಜಿ ತೂಕ, 18 ಇಂಚು ಉದ್ದ ಹಾಗೂ 12 ಇಂಚು ಅಗಲದ ಪುರಾತನವಾದ ಈ ವಸ್ತುವನ್ನು ಖರೀದಿಸಿರುವ ಹಾಗೂ ಹಣ ವರ್ಗಾಯಿಸಿರುವ ಸಂಪೂರ್ಣ ಮಾಹಿತಿ ಈ ದಾಖಲೆಯಲ್ಲಿದೆ. 2018ರಿಂದ ಹಿಡಿದು ಖಾತೆಗೆ ಹಣ ಜಮೆಯಾಗಿದೆ ಎನ್ನಲಾದ ಈ ವರ್ಷದ ಜನವರಿ 16 ರವರೆಗಿನ ಸಂಪೂರ್ಣ ಮಾಹಿತಿ ಈ ದಾಖಲೆಯಲ್ಲಿದೆ. ಇದರೊಂದಿಗೆ, ಭಾರತ ಸರ್ಕಾರದ ವಿದೇಶಾಂಗ ಇಲಾಖೆ, ಆರ್​ಬಿಐ ಸೇರಿ ಇತರ ಹಲವಾರು ಇಲಾಖೆಗಳ ಪತ್ರಗಳೂ ಈ ದಾಖಲೆಯಲ್ಲಿರುವುದು ವಿಶೇಷ.

ರೈಸ್​ ಪುಲ್ಲಿಂಗ್​ ದಂಧೆ?

ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್​ 3.27 ಲ ಕೋಟಿ ರೂ. ಆದರೆ, ಈ ಬಜೆಟನ್ನೂ ಮೀರಿಸುವಷ್ಟು ಹಣ ಈ ಯುವತಿಯ ಖಾತೆಗೆ ಜಮೆಯಾಗಿದೆ ಎಂಬುದರ ಹಿಂದೆ ರೈಸ್​ ಪುಲ್ಲಿಂಗ್​ (ಆರ್​ಪಿ) ದಂಧೆ ಇದೆಯೇ ಎಂಬ ಅನುಮಾನ ಮೂಡಿದೆ. ವಾಸ್ತವವಾಗಿ ಈ ಯುವತಿಗೆ ಯಾವುದೇ ಹಣ ಬಂದಿಲ್ಲವಾದರೂ, ರೈಸ್​ ಪುಲ್ಲಿಂಗ್​ ಮಾರಾಟದಲ್ಲಿ ಹಣ ಬಂದಿದೆ ಎಂದು ಬಿಂಬಿಸಲು ಅಥವಾ ಜಮೆಯಾಗಿದೆ ಎನ್ನಲಾದ ಹಣದ ಹೆಸರಿನಲ್ಲಿ ವಂಚನೆ ಮಾಡಲು ದಂಧೆಕೋರರು ತಂತ್ರ ಹೆಣೆದಿರುವ ಸಂಭವವಿದೆ. ಯುವತಿಯ ಖಾತೆಗೆ ಹಣ ಬಂದಿದೆ ಎನ್ನಲಾದ ದಾಖಲೆಗಳನ್ನು ಸೃಷ್ಟಿಸಿರುವ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ರೈಸ್​ ಪುಲ್ಲಿಂಗ್​ ದಂಧೆಯ ಮುಂದುವರಿದ ಭಾಗ ಇದು ಎಂಬುದರಲ್ಲಿ ಸಂದೇಹವೇ ಇಲ್ಲ ಎನ್ನಬಹುದಾಗಿದೆ. ಈ ಯುವತಿಯ ಗ್ರಾಮ ಈ ಹಿಂದೆ ಗಂಗರ ಉಪರಾಜಧಾನಿಯಾಗಿದ್ದು, ಈ ಗ್ರಾಮದಲ್ಲಿ ಈ ಅಮೂಲ್ಯ ವಸ್ತು ಸಿಕ್ಕಿದೆ ಎಂದರೆ ನಂಬಿಕೆಗೆ ಅರ್ಹ ಎಂಬ ಕಾರಣದಿಂದ ಈ ಸಂಚು ನಡೆದಿರುವ ಸಂಭವವೂ ಇದೆ. ಒಟ್ಟಾರೆ, ಈ ಪ್ರಕರಣ ತಾಲೂಕಿನಲ್ಲೂ ರೈಸ್​ ಪುಲ್ಲಿಂಗ್​ ಎಂಬ ದಂಧೆ ಕಣ್ಣು ಬಿಡುತ್ತಿರುವ ಸ್ಮೂ ಲಣವನ್ನು ಹೊರಹಾಕಿದೆ.

ಪೊಲೀಸರು ಗಮನಹರಿಸಬೇಕಿದೆ!

ಯುವತಿಗೆ ಸಿಕ್ಕಿದೆ ಎನ್ನಲಾದ ಅಮೂಲ್ಯ ವಸ್ತುವನ್ನು ಖರೀದಿಸಿರುವ ವಿದೇಶಿ ಕಂಪನಿ ಲಕ್ಷಾಂತರ ಕೋಟಿ ಹಣವನ್ನು ಯುವತಿಯ ಖಾತೆಗೆ ಜಮೆ ಮಾಡಿದೆ ಎಂಬ ಈ ಸುದ್ದಿ ಕೆಲದಿನಗಳಿಂದ ಯುವತಿಯ ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮದಲ್ಲಿ ಗುಸುಗುಡುತ್ತಿದೆ. ಇದಕ್ಕೆ ಪೂರಕವಾಗಿ ಅಸಲಿ ಎಂದು ಬಿಂಬಿಸಿರುವ ನಕಲಿ ದಾಖಲೆಗಳು ಇದಕ್ಕೆ ಪುಷ್ಟಿ ನೀಡಿವೆ. ಹಣ ಬಂದಿದೆಯೋ? ಬರಬೇಕೋ? ಹೀಗೆ ನಾನಾ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲವಾಗಿದೆ. ಆದರೆ, ಈ ಬಹುಕೋಟಿ ಹಣದ ಬಗ್ಗೆ ಮಾತ್ರ ಸಾಕಷ್ಟು ಚರ್ಚೆ ನಡೆಯುತ್ತಿದೆ. ಗ್ರಾಮದ ಮೂಲಗಳು ನೀಡುವ ಮಾಹಿತಿ ಪ್ರಕಾರ ಯುವತಿಯ ನಡೆ ಸಹ ಸಾಕಷ್ಟು ಅನುಮಾನ ಮೂಡಿಸಿದ್ದು, ಈಕೆಯನ್ನು ಭೇಟಿಯಾಗಲು ಹಲವರು ಯತ್ನಿಸುತ್ತಿರುವ ಮಾಹಿತಿ ತಿಳಿದುಬಂದಿದೆ. ಒಟ್ಟಾರೆ, ಈ ಪ್ರಕರಣದ ಬಗ್ಗೆ ಪೊಲೀಸ್​ ಇಲಾಖೆ ಗಮನಹರಿಸುವ ಅವಶ್ಯಕತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net