

ಕಂಪ್ಲಿ: ಆಹಾರ ಇಲಾಖೆ ವಿತರಿಸುವ ಅಕ್ಕಿಯಲ್ಲಿ ಪೌಷ್ಟಿಕಾಂಶವಿರುತ್ತದೆ. ಅದನ್ನು ಮಾರಿಕೊಳ್ಳದೆ ಊಟ ಮಾಡಬೇಕು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಅನುದಾನ ಹಾಗೂ ಸ್ವ ಸಹಾಯಸಂಘಗಳಿಗೆ ಲಾಭಾಂಶ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರವರ್ಧಿತ ಅಕ್ಕಿಯನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಅನ್ನರುಚಿ ಇಲ್ಲದಿದ್ದರೂ ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಪಡಿತರ ಅಕ್ಕಿಯನ್ನು ಇಡ್ಲಿ, ದೋಸೆ ಸೇರಿ ತರ ಆಹಾರ ಪದಾರ್ಥ ತಯಾರಿಸಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ಕಾರ ನೀಡುವ ನಾನಾ ಭಾಗ್ಯಯೋಜನೆಗಳ ಹಣವನ್ನು ಪೋಲು ಮಾಡದೆ ಜೀವನ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಮನೆಯಲ್ಲಿಯೇ ಪೌಷ್ಟಿಕಯುಕ್ತ ಆಹಾರ ತಯಾರಿಸುವ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಶ್ರೀಧರ್ ಸಾವಯವ ಕೃಷಿ ಮತ್ತು ಅದರ ಪ್ರಸ್ತುತ ಮಹತ್ವ ಕುರಿತು ಉಪನ್ಯಾಸ ನೀಡಿದರು. ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್ ಯೋಜನಾಧಿಕಾರಿ ಹಾಲಪ್ಪ, ಕೃಷಿ ಅಧಿಕಾರಿ ಸಂಜೀವಕುಮಾರ್, ವಲಯ ಮೇಲ್ವಿಚಾರಕ ರವಿಚಂದ್ರ, ಅಂಬೇಡ್ಕರ್ ಒಕ್ಕೂಟ ಅಧ್ಯಕ್ಷೆ ಬೇಬಿ, ಸೇವಾಪ್ರತಿನಿಧಿಗಳಿದ್ದರು.