

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಮೀನು ಪರಿವರ್ತನೆಗಾಗಿ ತಕರಾರು ರಹಿತ ಪ್ರಮಾಣ ಪತ್ರ ನೀಡಲು ಲಂಚ ತೆಗೆದುಕೊಳ್ಳುತ್ತಿದ್ದ ಜಿಲ್ಲೆಯ ಆಳಂದ ತಹಸೀಲ್ದಾರ ಕಚೇರಿಯ ಕಂದಾಯ ನಿರೀಕ್ಷಕ ಲೋಕಾಯುಕ್ತರು ಬೀಸಿದ ಬಲೆಗೆ ಸಿಕ್ಕು ಬಿದ್ದಿದ್ದಾರೆ.
ಕಂದಾಯ ನಿರೀಕ್ಷಕ ರಾಜಶೇಖರ ಲೋಕಾಯುಕ್ತ ಬಲೆಗೆ ಲಂಚದ ಹಣದ ಸಮೇತ ಸಿಕ್ಕು ಬಿದ್ದವರು. ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡು,. ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಮೆಹಬೂಬಪಟೇಲ್ ಎಂಬುವರ ಕೃಷಿ ಜಮೀನು ಕೃಷಿಯೇತರ ಜಮೀನು (ಎನ್) ಆಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಎನ್‌ಒಸಿ ನೀಡಲು ಹಣದ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪಟೇಲ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಗುರುವಾರ ಆಳಂದ ಪಟ್ಟಣದಲ್ಲಿರುವ ತಹಸೀಲ್ದಾರ ಕಚೇರಿಯಲ್ಲಿಯೇ ೧೨ ಸಾ.ರೂ. ಲಂಚ ಪಡೆಯುವಾಗ ಲೋಕಾಯುಕ್ತ ಇನ್‌ಸ್ಪೆಕ್ಟರ್ ನಾನಾಗೌಡ ಮತ್ತು ಸಿಬ್ಭಂದಿ ಕೂಡಿಕೊಂಡು ದಾಳಿ ನಡೆಸಿದ್ದಾರೆ.
. ಗುರುವಾರ ಸಂಜೆ ಹಣವನ್ನು ಕಚೇರಿಯಲ್ಲಿ ಪಡೆದುಕೊಳ್ಳುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಹಣದ ಸಮೇತವಾಗಿ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಕಲಬುರಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.