ಸುವರ್ಣಗ್ರಾಮ ಯೋಜನೆಗೆ ಮರುಜೀವ

11-hvr-03a
Published on

ಹಾವೇರಿ: ಬಿಜೆಪಿ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದು, ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿರುವ ಸುವರ್ಣಗ್ರಾಮ ಯೋಜನೆಯನ್ನು ಪುನರಾರಂಭಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಮಯದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಜಾರಿಗೊಳಿಸಿದ್ದ ಸುವರ್ಣಗ್ರಾಮ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅದನ್ನು ರದ್ದುಗೊಳಿಸಿ ಗ್ರಾಮವಿಕಾಸ ಯೋಜನೆ ಜಾರಿಗೊಳಿಸಿತು. ಇದರಿಂದ ಯಾವ ಗ್ರಾಮಗಳೂ ಸಮರ್ಪಕವಾಗಿ ಅಭಿವೃದ್ಧಿ ಕಂಡಿಲ್ಲ. ದಾಖಲೆಗಳಲ್ಲಿ ಮಾತ್ರ ಬಯಲು ಬಹಿರ್ದೆಸೆ ಮುಕ್ತವಾಗಿವೆ. ಹೀಗಾಗಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸುವರ್ಣಗ್ರಾಮ ಯೋಜನೆ ಜಾರಿಯ ಅವಶ್ಯವಿದೆ ಎಂದರು.

ಜನಪರ, ರೈತಪರ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದೆ. ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ಮನೆಗೂ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಗ್ರಾಪಂ ಸದಸ್ಯರು ಗ್ರಾಮಗಳಲ್ಲಿ ಮೂಲಸೌಲಭ್ಯ ಒದಗಿಸುವ ಜತೆಗೆ ಸಾಮರಸ್ಯ ಕಾಪಾಡುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಪಕ್ಷ ಬೆಂಬಲಿತರು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಬೇರೆ ಪಕ್ಷದವರಂತೆ ಅಧ್ಯಕ್ಷ ಸ್ಥಾನಕ್ಕಾಗಿ ಪ್ರವಾಸ ಹೋಗುವ ಪರಿಪಾಠಕ್ಕೆ ಮುಕ್ತಾಯ ಹಾಡಬೇಕು ಎಂದರು.

ಕಾಂಗ್ರೆಸ್​ನವರು ಸುಳ್ಳಿನ ಕಂತೆಯ ಪುಸ್ತಕವೊಂದನ್ನು ಬಿಡುಗಡೆಗೊಳಿಸಿದ್ದಾರೆ. 2015ರಲ್ಲಿ ರಿಲಯನ್ಸ್ ಕಂಪನಿಯೊಂದಿಗೆ ನೇರ ಮಾರಾಟ ಹಾಗೂ ಖರೀದಿಗೆ ಪರವಾನಗಿ ಕೊಟ್ಟವರು ಅವರೇ. ಈಗ ನಾವು ರೈತರ ಉತ್ಪನ್ನಗಳಿಗೆ ಹೆಚ್ಚಿನ ದರ ಸಿಗಲಿ ಎಂಬ ಉದ್ದೇಶದಿಂದ ಕೃಷಿ ಕಾಯ್ದೆಗೆ ತಿದ್ದಪಡಿ ತಂದರೆ ವಿರೋಧಿಸುತ್ತಿದ್ದಾರೆ. ಇದು ಇವರ ದ್ವಂದ್ವ ನೀತಿಯನ್ನು ತೋರಿಸುತ್ತಿದೆ. ಯಡಿಯೂರಪ್ಪ ಅವರಿಂದ ಯಾವೊಬ್ಬ ರೈತರಿಗೂ ಅನ್ಯಾಯ ಹಾಗೂ ತೊಂದರೆಯಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net