ನವಿಲುಗರಿ ವಿದ್ಯಾಪೀಠಕ್ಕೆ ಮರುಜೀವ

24KWR2-Navilugari Vidyapeetha
Published on

ಕಾರವಾರ: ಹಲ ವರ್ಷಗಳಿಂದ ಕಾರ್ಯಚಟುವಟಿಕೆ ಇಲ್ಲದೆ ಪಾಳು ಬಿದ್ದಿರುವ ಶಿರಸಿ ಗುಡ್ನಾಪುರ ಸಮೀಪದ ನವಿಲುಗರಿ ವಿದ್ಯಾಪೀಠಕ್ಕೆ ಮರುಜೀವ ಕೊಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಜಾಗವನ್ನು ಸರ್ಕಾರ ಕೌಶಲಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿದ್ದು, ಅಲ್ಲಿ ಕುಶಲ ತರಬೇತಿಗಳನ್ನು ಮತ್ತೆ ಪ್ರಾರಂಭಿಸಲು ಇಲಾಖೆ ಯೋಜನೆ ರೂಪಿಸಿದೆ.

ಅಲ್ಪ ಶಿಕ್ಷಣ ಪಡೆದ ಯುವ ಸಮುದಾಯಕ್ಕೆ ಹೊಲಿಗೆ, ಮೆಕಾನಿಕ್ ಮುಂತಾದ ಅಲ್ಪ ಕಾಲದ ಔದ್ಯೋಗಿಕ ಸನಿವಾಸ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಜನ ಶಿಕ್ಷಣ ಸಂಸ್ಥಾನದ ಅಡಿ ಶಿರಸಿ ಚಿಕ್ಕಬೆಂಗಳೆ ಸಮೀಪ ನವಿಲುಗರಿ ವಿದ್ಯಾಪೀಠ ಪ್ರಾರಂಭವಾಗಿತ್ತು. ಅಲ್ಲಿನ ಸರ್ವೆ ನಂಬರ್ 177, 182 ಹಾಗೂ 184 ರಲ್ಲಿ ಒಟ್ಟು 65 ಎಕರೆ ಅರಣ್ಯ ಜಾಗವನ್ನು ಸರ್ಕಾರ ಡಿ ನೋಟಿಫೈ ಮಾಡಿ ಜನಶಿಕ್ಷಣ ಸಂಸ್ಥಾನಕ್ಕೆ ನೀಡಿತ್ತು. 1990 ರ ದಶಕದಲ್ಲಿ ಈ ಸಂಸ್ಥೆ ಜಿಲ್ಲೆಯ ಸಾವಿರಾರು ಯುವಕರಿಗೆ ವಿವಿಧ ತರಬೇತಿ ನೀಡಿ, ಸ್ವ ಉದ್ಯೋಗ ಕಲ್ಪಿಸಿದೆ. ಆದರೆ, ಅನುದಾನದ ಕೊರತೆ ಹಾಗೂ ಇನ್ನೂ ಹಲವು ಕಾರಣಗಳಿಂದ ಕೆಲ ವರ್ಷಗಳ ಹಿಂದೆಯೇ ಅಲ್ಲಿ ತರಬೇತಿಗಳು ಸ್ಥಗಿತವಾಗಿದ್ದವು. ವಿದ್ಯಾಪೀಠದ ಜಮೀನಿನಲ್ಲಿ ಕಾಡು ಬೆಳೆದಿದೆ. ಕಟ್ಟಡ ಪಾಳು ಬಿದ್ದಿದೆ. ಸರ್ಕಾರದ ಆಸ್ತಿ ಹಾಳಾಗುತ್ತಿದೆ. ಇದರಿಂದ ವಿಶಾಲ ಜಮೀನು ಹಾಗೂ ತರಬೇತಿ ಕೇಂದ್ರವನ್ನು 2018 ರಲ್ಲಿ ಸರ್ಕಾರ ಕೌಶಲಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಕಾರವಾರದಲ್ಲಿ ಒಂದು ಕಚೇರಿ ಹಾಗೂ ಸೌಲಭ್ಯ ಪಡೆದುಕೊಂಡು ಕಾರ್ಯಪ್ರವೃತ್ತವಾಗಿರುವ ಕೌಶಲ್ಯಾಭಿವೃದ್ಧಿ ಇಲಾಖೆ ಈಗ ನವಿಲುಗರಿ ವಿದ್ಯಾಪೀಠದಲ್ಲಿ ಕೃಷಿ ಸಂಬಂಧಿ ಕುಶಲ್ಯ ತರಬೇತಿಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

ಜಾಗ ಒತ್ತುವರಿ: ಹಲ ವರ್ಷಗಳಿಂದ ಕಾರ್ಯಚಟುವಟಿಕೆ ಇಲ್ಲದೆ ಪಾಳು ಬಿದ್ದಿದ್ದರಿಂದ ನವಿಲುಗರಿ ವಿದ್ಯಾಪೀಠದ ಹತ್ತಾರು ಎಕರೆ ಜಾಗ ಒತ್ತುವರಿಯಾಗಿದೆ ಎಂಬ ಮಾಹಿತಿ ಇದೆ. ಅವುಗಳನ್ನು ಸರ್ವೆ ಮಾಡಿಸಿ ಬೇಲಿ ಹಾಕುವಂತೆ ಸರ್ಕಾರ ಕೌಶಲ್ಯಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದೆ. ಈ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಪ್ರಾರಂಭವಾಗಿವೆ.

ಶಿರಸಿ ಚಿಕ್ಕಬೆಂಗಳೆ ಸೇರಿ ರಾಜ್ಯದ 16 ವಿದ್ಯಾಪೀಠಗಳನ್ನು ಕೌಶಲಾಭಿವೃದ್ಧಿ ಇಲಾಖೆ ವಶಕ್ಕೆ ನೀಡಿ ಸರ್ಕಾರ 2018 ರಲ್ಲಿ ಆದೇಶ ಮಾಡಿದೆ. ಆಸ್ತಿಯನ್ನು ರಕ್ಷಣೆ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ನಾವು ಸಂಬಂಧಪಟ್ಟ ತಹಸೀಲ್ದಾರರಿಗೆ ಪತ್ರ ಬರೆದು ಸರ್ವೆ ಮಾಡಿಸುವಂತೆ ಮನವಿ ಮಾಡಿದ್ದೇವೆ. ಕೌಶಲಾಭಿವೃದ್ಧಿ ತರಬೇತಿಗಳನ್ನೂ ಪ್ರಾರಂಭಿಸುವ ಯೋಜನೆ ರೂಪುಗೊಂಡಿದೆ.ಡಿ.ಟಿ.ನಾಯ್ಕಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net