

ಕಲಘಟಗಿ ಆಗಸ್ಟ್ 1ರಿಂದ ಪ್ರತಿ ಲೀಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲಿದ್ದೇವೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ಪಟ್ಟಣದ ಹನ್ನೆರಡು ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್. ಕೋಡಿಯಾಲಮಠ ಮಾತನಾಡಿ, ಒಕ್ಕೂಟದ ಇತಿಹಾಸದಲ್ಲಿ ಯಾರೂ ಮಾಡದ ಪ್ರತಿಭಾ ಪುರಸ್ಕಾರವನ್ನು ನಿರ್ದೇಶಕಿ ಗೀತಾ ಮರಲಿಂಗಣ್ಣವರ ಮಾಡಿದ್ದು, ಸದಸ್ಯರ ಮಕ್ಕಳಿಗೆ ಪ್ರೇರಣಾತ್ಮಕವಾಗಿದೆ ಎಂದರು.
ಶಶಿಧರ ನಿಂಬಣ್ಣವರ ಮಾತನಾಡಿ, ಕೃಷಿಕರು ಸಂಕಷ್ಟದಲ್ಲಿದ್ದು, ಕೃಷಿಯ ಜತೆಗೆ ಹ್ಯೆನುಗಾರಿಕೆ ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ನಿರ್ದೇಶಕಿ ಗೀತಾ ಮರಲಿಂಗಣ್ಣವರ ಮಾತನಾಡಿ, ಕಲಘಟಗಿ ತಾಲೂಕಿನ ಹಾಲು ಉತ್ಪಾದಕರ ಸಂಘಗಳಿಗೆ ಮೌಲ ಸೌಲಭ್ಯ ಒದಗಿಸಿ ಅವುಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ದೇವಪ್ಪ ಮೋರೆ, ಬಸವರಾಜ ನಡುವಿನಮನಿ, ಈರಪ್ಪ ನಾಯ್ಕರ, ಮಯೂರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನಂತರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ 45 ಸಂಘಗಳಲ್ಲಿನ ಸದಸ್ಯರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ತಾ.ಪಂ. ಮಾಜಿ ಅಧ್ಯಕ್ಷ ಫಕೀರೇಶ ನೇಸ್ರೇಕರ, ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಜಗದೀಶ ಕಮ್ಮಾರ, ಯುವ ಕೃಷಿಕ ಬಸವರಾಜ ನಡುವಿನಮನಿ, ನಿಂಗಯ್ಯ ಕುರ್ಡಿಕೇರಿ, ಗುರುನಾಥಗೌಡ ಬಸನಗೌಡರ, ಕಲ್ಲಪ್ಪ ಪುಟ್ಟಪ್ಪನವರ, ಆರ್.ಎಂ. ಹೊಲ್ತಿಕೋಟಿ, ಐ.ವಿ, ಜವಳಿ, ಯು.ಸಿ. ತಾವರಗೇರಿ, ಎಂ.ಬಿ. ಬಣಕಾರ, ಕಿರಣ ಪಾಟೀಲ, ಸಿ.ಬಿ. ಗುಡಿಮನಿ, ಎಸ್.ಎಚ್. ದಾನಣ್ಣವರ, ಸುರೇಶ ನೀಲಣ್ಣವರ ಇದ್ದರು.