ವರುಣ ಕ್ಷೇತ್ರದಾದ್ಯಂತ ಕಂದಾಯ/ಪೋಡಿ ಅದಾಲತ್

22 may tnp 01
Published on

ತಿ.ನರಸೀಪುರ: ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವುದರ ಜತೆಗೆ ರೈತರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಂದಾಯ/ಪೋಡಿ ಅದಾಲತ್ ಕಾರ್ಯಕ್ರಮವನ್ನು ವರುಣ ವಿಧಾನಸಭಾ ಕ್ಷೇತ್ರದಾದ್ಯಂತ ಆಯೋಜಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಯಡದೊರೆ ಗ್ರಾಮದಲ್ಲಿ ಬುಧವಾರ 6.54 ಕೋಟಿ ರೂ. ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ಹಾಗೂ 20 ಲಕ್ಷ ರೂ.ವೆಚ್ಚದ ಶ್ರೀ ಸಿದ್ದಪಾಜ್ಜಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿರು.

ಹಳ್ಳಿಗಳಲ್ಲಿ ರೈತರ ಜಮೀನುಗಳ ಪೋಡಿ ಸಮಸ್ಯೆ ಬಹಳಷ್ಟಿದ್ದು, ಅದಾಲತ್ ಮೂಲಕ ಅವುಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಸರಿಪಡಿಸಲು ಕ್ರಮ ವಹಿಸಲಾಗುತ್ತದೆ. ಹಾಗಾಗಿ ಅಧಿಕಾರಿಗಳ ಜತೆ ಜನಸಂಪರ್ಕ ಸಭೆಗಳನ್ನು ನಡೆಸುತ್ತಿದ್ದೇವೆ ಎಂದರು.

ಯಡದೊರೆ ಗ್ರಾಮ ಎಂದರೆ ಸಿಎಂ ಸಿದ್ದರಾಮಯ್ಯ ಹಾಗೂ ನನಗೂ ವಿಶೇಷವಾದ ಕಾಳಜಿಯಿದೆ. ಗ್ರಾಮದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕಾದದ್ದು ನಮ್ಮ ಜವಾಬ್ದಾರಿ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಿರಂತರವಾಗಿ ಬೆಂಬಲ ನೀಡುತ್ತಿರುವ ಗ್ರಾಮಸ್ಥರ ವಿಶ್ವಾಸವನ್ನು ಮರೆಯಲು ಸಾಧ್ಯವಿಲ್ಲ. ಮನವಿ ಪತ್ರದಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸಾರಿಗೆ ಬಸ್ ನಿಲುಗಡೆ, ರಸ್ತೆ ವಿಸ್ತರಣೆಗೆ ಕ್ರಮ: ಸರ್ಕಾರಿ ಸಾರಿಗೆ ಬಸ್ ನಿಲುಗಡೆ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಗ್ರಾಮದಿಂದ ನೇರ ಪರ್ಯಾಯ ರಸ್ತೆಯ ಸಂಪರ್ಕಕ್ಕೆ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಾಧಿಕಾರಿಗಳಿಗೆ ಸ್ಥಳದಲ್ಲೇ ಫೋನ್ ಮಾಡಿ ಬಸ್‌ಗಳನ್ನು ನಿಲ್ಲಿಸಿ ಹೊರಡುವಂತೆ ಸೂಚನೆ ನೀಡಬೇಕೆಂದು ತಾಕೀತು ಮಾಡಿದರು.

ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ ಮಾತನಾಡಿ, ಸಿಎಂ ಹಾಗೂ ವಿಧಾನಪರಿಷತ್ ಸದಸ್ಯರ ಕಾಳಜಿಯಿಂದ ಯಡದೊರೆ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ. ಗ್ರಾಮದಲ್ಲಿ ಉದ್ಯಾನವನ, ಹೈಮಾಸ್ಕ್ ದೀಪ ಹಾಗೂ ಅಂಬೇಡ್ಕರ್ ಪುತ್ತಳಿ ನಿರ್ಮಾಣದ ಬೇಡಿಕೆಯನ್ನು ಈಡೇರಿಸುವಂತೆ ಯುವ ಸಮುದಾಯ ಒತ್ತಾಯಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಮೂರು ಅಭಿವೃದ್ಧಿ ಕಾರ್ಯಗಳನ್ನು ಯತೀಂದ್ರ ಸಿದ್ದರಾಮಯ್ಯ ಅವರು ನೆರವೇರಿಸಬೇಕು. ಕೆಲವು ಕಾಮಗಾರಿಗಳು ಅನುದಾನ ಮಂಜೂರಾಗಿದ್ದರು ಕಾಮಗಾರಿ ಪೂರ್ಣಗೊಂಡಿಲ್ಲ. ಅಂತಹ ಕಾಮಗಾರಿಗಳ ಮರು ಚಾಲನೆಗೆ ಪರಿಷತ್ ಸದಸ್ಯರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ನಂತರ ಪಕ್ಕದ ಕುರಿಸಿದ್ದನಹುಂಡಿ(ಚಿಕ್ಕ ಯಡದೊರೆ) ಗ್ರಾಮದಲ್ಲೂ ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಿದ ಯತೀಂದ್ರ 22 ಲಕ್ಷ ರೂ.ಗಳ ಅನುದಾನದಲ್ಲಿ ಶೀ ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣಕ್ಕೂ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಗರ್ಗೇಶ್ವರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೋಡಿ ಅದಾಲತ್ ಕಾರ್ಯಕ್ರಮ ನಡೆಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ, ಸಿಬ್ಬಂದಿ ಪರಿಷತ್ ಸದಸ್ಯರಿಗೆ ಜನರು ಮನವಿ ಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದರಾಜು, ಡೈರಿ ಅಧ್ಯಕ್ಷ ಮರಯ್ಯ, ತಾ.ಪಂ ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಉಪಾಧ್ಯಕ್ಷ ಪ್ರಕಾಶ್, ಮಾಜಿ ಸದಸ್ಯ ಎಂ.ರಮೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ನಿರ್ದೇಶಕ ಎನ್.ಅನಿಲ್ ಕುಮಾರ್, ಹಾಳೇಗೌಡ, ತುಂಬಲ ಮಂಜುನಾಥ್, ಬಟ್ಟಾಳಿಗೆಹುಂಡಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್ ಮುದ್ದೇಗೌಡ, ಮಸ್ರೂರ್ ಅಹಮದ್, ಖಲೀಲ್, ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಅನಂತರಾಜು, ಕೆ ಆರ್ ಐ ಡಿ ಎಲ್ ಕಾರ್ಯಪಾಲಕ ಇಂಜಿನಿಯರ್ ತಿಪ್ಪಾರೆಡ್ಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಅರ್ಚನಾ, ನಿರ್ಮಿತ ಕೇಂದ್ರ ನಿರ್ಮಿತಿ ಕೇಂದ್ರ ಜೆ ಇ ಸ್ಮಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಧನಂಜಯ, ಅಮ್ಜದ್ ಪಾಷ, ಮೊಹಮ್ಮದ್ ಇಷಾಕ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್ ಬಾಬು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಪ್ರಕಾಶ್, ಸದಸ್ಯರಾದ ಎನ್.ಸೋಮು, ಸೈಯದ್ ಅಹಮದ್, ಮುದ್ದಬೀರನಹುಂಡಿ ಗುರುಸ್ವಾಮಿ, ಕೆ.ಗಣೇಶ್, ಮಾಜಿ ಸದಸ್ಯರಾದ ಎಂ.ಮಿಥುನ್, ಹೇಮಂತ್ ಕುಮಾರ್, ರಜತ್ ಸ್ವಾಮಿ, ಗರ್ಗೆಶ್ವರಿ ಗೋಪಾಲರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net