

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆದಾಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಬುಧವಾರ ಸ್ಪಷ್ಟೀಕರಣ ನೀಡಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ’ಎ’ ವರ್ಗಕ್ಕೆ ಸೇರಿದ್ದು, ರಾಜ್ಯದಲ್ಲಿ ಎರಡನೇ ಶ್ರೀಮಂತ ದೇವಳವಾಗಿದೆ. ಎರಡು ವರ್ಷಗಳಿಂದ ಕ್ಷೇತ್ರದಲ್ಲಿ 57,94,30,927.84 ರೂ. ಉಳಿತಾಯವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ದೇವಳದ ಖಾತೆಯಲ್ಲಿ ನಿರಖು ಠೇವಣಿ ಇಡಲಾಗಿದೆ. ಪ್ರಸ್ತುತ ದೇವಳದ ಖಾತೆಯಲ್ಲಿ 212 ಕೋಟಿ ರೂ. ನಿರಖು ಠೇವಣಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕ್ಷೇತ್ರದ ಖರ್ಚು, ವಾರ್ಷಿಕ ಜಾತ್ರೆ, ಅಭಿವದ್ಧಿ ಕೆಲಸ, ಸಿಬ್ಬಂದಿ ವೇತನ, ಅನ್ನಸಂತರ್ಪಣೆ, ಮೂಲ ಸೌಕರ್ಯ, ಗೋಶಾಲೆ ನಿರ್ವಹಣೆ ಹಾಗೂ ದೇವಸ್ಥಾನಕ್ಕೆ ಸೇರಿದ ಐದು ಪ್ರೌಢಶಾಲೆ ಮತ್ತು ಒಂದು ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ವಾಡುತ್ತಿರುವ ಮಕ್ಕಳಿಗೆ ಉಚಿತ ಬಿಸಿಊಟ, ಪಠ್ಯ ಪುಸ್ತಕ, ಸಮವಸ ಸಹಿತ ಇತರ ಖರ್ಚಿಗೆ ದೇವಳದ ಆದಾಯ ವಿನಿಯೋಗಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇವಸ್ಥಾನದ ಭಂಡಾರದಿಂದ ಸರ್ಕಾರಕ್ಕೆ ಹಣ ಸಂದಾಯಗೊಂಡಿಲ್ಲ. ದೇವಸ್ಥಾನದ ಆವರಣದ ಮುಂಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ದೇವಳದ ವ್ಯಾಪ್ತಿಗೆ ಸೇರಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದ ಬಗ್ಗೆ, ಕ್ಷೇತ್ರದ ಆದಾಯದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದರು.