

ಬಾಗೇಪಲ್ಲಿ: ಸಾರ್ವಜನಿಕ ಟೀಕೆಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಸೇಡಿನ ರಾಜಕಾರಣ ಮಾಡುತ್ತಿರುವ ಶಾಸಕರ ನಡೆಯಿಂದ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿರುವುದನ್ನು ಸಿಪಿಎಂ ತೀವ್ರವಾಗಿ ಖಂಡಿಸುತ್ತಿದೆ ಎಂದು ಸಂಘಟನೆ ತಾಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ತಿಳಿಸಿದ್ದಾರೆ.
ಶಿವಪುರ ಗ್ರಾಮದ ಹುಣಸೆೆ ಸಲು ಕೀಳುವ ಹಾಗೂ ಚರಂಡಿ ನಿರ್ಮಾಣ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದಿರುವ ವಿವಾದ ಕುರಿತಂತೆ ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ರೈತರೊಬ್ಬರು ಮಧ್ಯ ಪ್ರವೇಶಿಸಿ ಶಾಸಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಶಾಸಕರ ಬೆಂಬಲಿಗರು ಗುಂಪು ಕಟ್ಟಿಕೊಂಡು ರಾತ್ರಿ ವೇಳೆ ಅವರ ಾರ್ಮ್‌ಹೌಸ್ ಬಳಿ ಹೋಗಿ ದಾಂಧಲೆ ನಡೆಸಿ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದರು.
ದಾಂಧಲೆಗೆ ಸಂಬಂಧಿಸಿದಂತೆ ರೈತರು ಮತ್ತು ಶಾಸಕರ ಬೆಂಬಲಿಗರ ಗುಂಪು ಪಾತಪಾಳ್ಯ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿದರೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಕ್ಷೇತ್ರದ ಶಾಸಕರು ಸಾರ್ವಜನಿಕ ಟೀಕೆಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಸೇಡಿನ ರಾಜಕಾರಣಕ್ಕೆ ಮುಂದಾಗಿರುವುದು ಶೋಚನೀಯ ಎಂದರು.