ದೇಶ ಕಾಯುವ ಸೈನಿಕರೇ ನಮಗೆ ಶ್ರೀರಕ್ಷೆ : ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಭಿಮತ : ನಿವೃತ್ತ ಯೋಧ ಪದ್ಮನಾಭರಿಗೆ ಕುಂಬ್ರದಲ್ಲಿ ಸ್ವಾಗತ

New Project (17)
Published on

ಪುತ್ತೂರು ಗ್ರಾಮಾಂತರ: ನಮ್ಮ ದೇಶದ ಗಡಿ ಕಾಯುವ ಸೈನಿಕರೇ ನಮಗೆ ಶ್ರೀರಕ್ಷೆ. ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ ಎಂದು ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.

ಭಾರತೀಯ ಸೇನೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ, ಜೂನ್ 30ರಂದು ನಿವೃತ್ತಿಗೊಂಡು ತಾಯ್ನಾಡಾದ ಮಂಡೆಕೋಲು ಗ್ರಾಮದ ಸೊರಂಜಗೆ ಗುರುವಾರ ತೆರಳುತ್ತಿದ್ದ ಪದ್ಮನಾಭ ಗೌಡ ಅವರಿಗೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ವಿದೀಪ್‌ಕುಮಾರ್ ಕಾರ್ಯಕ್ರಮ ಸಂಯೋಜಿಸಿದ್ದರು. ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ, ಕುಂಬ್ರ ವರ್ತಕರ ಸಂಘ, ಒಳಮೊಗ್ರು ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪದ್ಮನಾಭ ಗೌಡ ಅವರನ್ನು ಸ್ವಾಗತಿಸಲಾಯಿತು.

ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಉಪಾಧ್ಯಕ್ಷ ಜೊಸೆಫ್ ಪಿ.ಚೆರಿಯನ್, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಕುಂಬ್ರ ವರ್ತಕರ ಸಂಘ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಮಿತ್ರಂಪಾಡಿ ಪುರಂದರ ರೈ, ಕುಂಬ್ರ ವರ್ತಕರ ಸಂಘ ಅಧ್ಯಕ್ಷ ಪಿ.ಕೆ.ಮಹಮ್ಮದ್ ಕೂಡುರಸ್ತೆ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ, ಯೋಧ ಪದ್ಮನಾಭ ಗೌಡರ ಪತ್ನಿ ಸುಶೀಲಾ ಮತ್ತಿತರರಿದ್ದರು.

ಕುಂಬ್ರ ವರ್ತಕರ ಸಂಘ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿದರು. ವರ್ತಕರ ಸಂಘ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net