

ಬೆಂಗಳೂರು: ಮಾನಸಿಕವಾಗಿ ನೊಂದು ವಿಷ ಸೇವಿಸಿದ್ದ ನಿವೃತ್ತ ಹೆಡ್ ಕಾನ್ಸ್ಟೆಬಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಮಿಣ್ಣಾಪುರ ಮೂಲದ ಗಂಗಪ್ಪ (63) ಸಾವಿಗೀಡಾದವರು.
ದಾಸರಹಳ್ಳಿಯ ಎಂಟನೇ ಮೈಲಿ ಬಳಿ ವಾಸವಿದ್ದ ಇವರು ಡಿ.2ರಂದು ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ಬಳಿ ವಿಷ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಇವರನ್ನು ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದಾಗ್ಯೂ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಅಂದಹಾಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಪ್ರಮುಖ ಕಾರಣವಿದೆ. ಅಣ್ಣ-ತಮ್ಮಂದಿರ ನಡುವಿನ ಜಮೀನು ವಿವಾದದಿಂದ ಇವರು ತೀರಾ ನೊಂದಿದ್ದರು. ಅಲ್ಲದೆ ಕಳೆದ ವರ್ಷ ಪುತ್ರ ಕೂಡ ಸಾವಿಗೀಡಾಗಿದ್ದ. ಹೀಗಾಗಿ ಬೇಸತ್ತು ಇವರು ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.