

ಶಿಡ್ಲಘಟ್ಟ: ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಎಚ್ಚರಿಕೆಯಿಂದ ಕೆಲಸ ಮಾಡುವ ಜತೆಗೆ ಸಾರ್ವಜನಿಕರ ಭಾವನೆಗಳನ್ನು ಶಾಂತರೀತಿಯಲ್ಲಿ ಆಲಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್‌ಪಿ ಆ್ಯಂಟನಿ ಜಾನ್ ಸೂಚಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತರಿಂದ ಗುರುವಾರ ಆಯೋಜಿದ್ದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರ ಮನವಿ ಆಲಿಸಿ ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳು ಸೇರಿ ಧ್ಯೇಯೋದ್ದೇಶಗಳು ಸಫಲವಾಗಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ಸಾರ್ವಜನಿಕರು ಬಯಸಿದ ಕೆಲಸ ಮಾಡಲು ಯೋಗ್ಯವಾಗಿದ್ದು ಎಷ್ಟು ದಿನಗಳಲ್ಲಿ ಆಗುತ್ತದೆ ಅಥವಾ ಅವರ ಕೆಲಸ ಮಾಡಲು ಏನು ತೊಂದರೆಯಿದೆ ಎನ್ನುವುದನ್ನು ಅರ್ಥವಾಗುವಂತೆ ತಿಳಿಹೇಳುವುದು, ಲಿಖಿತವಾಗಿ ಉತ್ತರ ನೀಡಿದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುತ್ತದೆ ಎಂದರು.
ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ್ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 43 ಅರ್ಜಿ ಸ್ವೀಕಾರ
ಕಂದಾಯ ಇಲಾಖೆಗೆ ಸೇರಿದ 27, ಭೂಮಾಪನಾ ಇಲಾಖೆಯ 04, ಆರೋಗ್ಯ ಇಲಾಖೆ 01, ಅರಣ್ಯ ಇಲಾಖೆ 02, ತಾಲೂಕು ಪಂಚಾಯಿತಿ 06 ಹಾಗೂ ನಗರಸಭೆಗೆ ಸೇರಿದ 03 ಅರ್ಜಿ ಸೇರಿ ಒಟ್ಟು 43 ಅರ್ಜಿಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು.
ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ
ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲು ಅಧಿಕಾರಿಗಳು ವಿಳಂಬ ನೀತಿ ಅಥವಾ ನಿರ್ಲಕ್ಷ್ಯ ತೋರುವುದು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ, ಲಂಚದ ಬೇಡಿಕೆಯನ್ನಿಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ, ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೇರವಾಗಿ ಅಥವಾ ಅಂಚೆ ಮೂಲಕ ದೂರು ಸಲ್ಲಿಸಬಹುದು. ಯಾವುದೇ ಕೆಲಸವಾದರೂ ಮಧ್ಯವರ್ತಿಗಳ ಮೂಲಕ ಹೋಗದೆ ನೇರವಾಗಿ ಸಂಬಂದಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಆ್ಯಂಟನಿ ಜಾನ್ ತಿಳಿಸಿದರು.