ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ

ಗೌರಿಬಿದನೂರಿನಲ್ಲಿ ಹಮ್ಮಿಕೊಂಡಿದ್ದ ಲೋಕಾಯುಕ್ತ ಕುಂದುಕೊರತೆ ಸಭೆಯನ್ನು ಲೋಕಾ ಎಸ್‌ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಉದ್ಘಾಟಿಸಿದರು. ಪೌರಾಯುಕ್ತೆ ಡಿ.ಎನ್. ಗೀತಾ, ತಾಪಂ ಇಒ ಹೊನ್ನಯ್ಯ ಮತ್ತಿತರರು ಇದ್ದರು.
19 gbd 2 - loka
ಗೌರಿಬಿದನೂರಿನಲ್ಲಿ ಹಮ್ಮಿಕೊಂಡಿದ್ದ ಲೋಕಾಯುಕ್ತ ಕುಂದುಕೊರತೆ ಸಭೆಯನ್ನು ಲೋಕಾ ಎಸ್‌ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಉದ್ಘಾಟಿಸಿದರು. ಪೌರಾಯುಕ್ತೆ ಡಿ.ಎನ್. ಗೀತಾ, ತಾಪಂ ಇಒ ಹೊನ್ನಯ್ಯ ಮತ್ತಿತರರು ಇದ್ದರು.
Published on


ಅಧಿಕಾರಿಗಳಿಗೆ ಲೋಕಾಯುಕ್ತ ಎಸ್‌ಪಿ ವೀರೇಂದ್ರಕುಮಾರ್ ಸೂಚನೆ


ಗೌರಿಬಿದನೂರು:
ಸಾರ್ವಜನಿಕ ಕುಂದುಕೊರತೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಫಂದಿಸಿ ಪರಿಹಾರ ಸೂಚಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವೀರೇಂದ್ರಕುಮಾರ್ ಸೂಚಿಸಿದರು.
ತಾಲೂಕು ಕಚೇರಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಮಾವೇಶದಲ್ಲಿ ಮಾತನಾಡಿದರು.
ಲೋಕಾಯುಕ್ತ ಮೂರು ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸುತ್ತಿದೆ. ಮುಕ್ತವಾಗಿ ಜನರಿಂದ ಅರ್ಜಿ ಸ್ವೀಕರಿಸುವುದು, ಸರ್ಕಾರಿ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡುವಂತೆ ನಿಗಾ ವಹಿಸುವುದು ಹಾಗೂ ಸರ್ಕಾರಿ ನೌಕರರು ವೇತನಕ್ಕಿಂತಲೂ ಹೆಚ್ಚು ಚರ, ಸ್ಥಿರಾಸ್ತಿ ಹೊಂದಿದ್ದರೆ ಕಾನೂನು ಕ್ರಮ ಜರುಗಿಸಲು ಇಲಾಖೆ ಶ್ರಮಿಸುತ್ತಿದೆ ಎಂದರು.
ದೂರುಗಳ ಸುರಿಮಳೆ: ಸಭೆಯಲ್ಲಿ ನಗರಸಭೆ, ಸರ್ವೇ, ಕಂದಾಯ, ಅರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್ ಇಲಾಖೆಗಳಿಗೆ ಸಂಬಂಧಿಸಿದ 61ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನನ ಮರಣ ಪತ್ರ ನೀಡಲು ವಿಳಂಬ ಹಾಗೂ ದಾಖಲೆ ಲಭ್ಯವಿಲ್ಲ ಎಂಬ ದೂರುಗಳು ಬರುತ್ತಿವೆ. ಮುಂದೆ ಈ ರೀತಿ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿಗೆ ಲೋಕಾ ಎಸ್‌ಪಿ ಸೂಚಿಸಿದರು. ಸರ್ವೇ ಪ್ರಕರಣಗಳನ್ನು ಸೂಕ್ತವಾಗಿ ಇತ್ಯರ್ಥಪಡಿಸಬೇಕು. ಪಹಣಿಯಲ್ಲಿ ಬೇರೆ ಹೆಸರು ನಮೂದು ಆಗುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಸರ್ವೇ ಇಲಾಖೆ ಅಧಿಕಾರಿಗಳಿಗೆ ಅಧೀಕ್ಷಕರು ಸೂಚಿಸಿದರು.
ಲೋಕಾಯುಕ್ತ ನಿರೀಕ್ಷಕ ಶಿವಪ್ರಸಾದ್, ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಪೌರಾಯುಕ್ತೆ ಡಿ.ಎನ್.ಗೀತಾ, ತಾಪಂ ಇಒ ಹೊನ್ನಯ್ಯ, ಬಿಇಒ ಶ್ರೀನಿವಾಸಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಶೌಚಗೃಹದಲ್ಲಿ ಶುಚಿತ್ವವಿಲ್ಲ
ತಾಲೂಕಿನ ಕೆಲವು ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆಯಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಸ್ಮಶಾನಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದರು. ನಗರದ ಸಾರಿಗೆ ನಿಲ್ದಾಣದ ಸಾರ್ವಜನಿಕ ಶೌಚಗೃಹದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದರೂ ಶುಚಿತ್ವ ಕಾಪಾಡುತ್ತಿಲ್ಲ. ಹಣ ನೀಡಿ ಕೂಡ ಆರೋಗ್ಯ ಕೆಡಿಸಿಕೊಳ್ಳಬೇಕಾ ಎಂದು ಸಭೆಯಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿದರು.

ಲಂಚಕ್ಕೆ ಪ್ರೋತ್ಸಾಹಿಸಬೇಡಿ
ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರಿ ನಿಯಮಗಳು ಅಡ್ಡಿಯಾದಲ್ಲಿ ಅಥವಾ ಅರ್ಜಿದಾರನಿಂದ ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಅರ್ಜಿಯ ಹಿಂಬರಹವನ್ನು ಬರೆದು ದೂರುದಾರರಿಗೆ ಮಾಹಿತಿ ನೀಡಬೇಕು. ಅನಾವಶ್ಯಕವಾಗಿ ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಸಾರ್ವಜನಿಕರು ಲೋಕಾಯುಕ್ತ ಇಲಾಖೆಯನ್ನು ಸದ್ವಿನಿಯೋಗ ಪಡಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೆಲಸಗಳಿಗೆ ಲಂಚ ನೀಡುವುದನ್ನು ಪ್ರೋತ್ಸಾಹಿಸಬೇಡಿ. ಲಂಚಕ್ಕೆ ಬೇಡಿಕೆಯಿಟ್ಟಲ್ಲಿ ನಿರ್ಭಯವಾಗಿ ದೂರು ನೀಡಿ ವೀರೇಂದ್ರಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net