

ಹರಪನಹಳ್ಳಿ: ರಾಜ್ಯದಲ್ಲಿ ಹರಪನಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಶಾಸಕಿ ಎಂ.ಪಿ.ಲತಾಮಲ್ಲಿಕಾರ್ಜುನ ತಿಳಿಸಿದರು.
ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಲೂಕಿನಲ್ಲಿ ವಸತಿನಿಲಯಗಳಿಗೆ ಸ್ಥಳಾವಕಾಶದ ಕೊರತೆ, ಸಾರಿಗೆ ಸಮಸ್ಯೆ ಸೇರಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಬೇರೆ ಬೇರೆ ಕೆಲಸದ ನಿಮಿತ್ತ ತಮ್ಮ ಕಚೇರಿಗಳಿಗೆ ಸಾರ್ವಜನಿಕರು ಬಂದಾಗ ಅವರ ಕೆಲಗಳನ್ನು ತ್ವರಿತವಾಗಿ ಮಾಡಿ ಕಳುಹಿಸಬೇಕು ಎಂದು ನೌಕರರಿಗೆ ಕಿವಿಮಾತು ಹೇಳಿದರು.
ಕ್ಷೇತ್ರದ ಜನರ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಸತ್ಯ, ನಿಷ್ಠೆಯಿಂದ ಕೆಲಸ ಮಾಡಿ, ಹಿಂದೆ ನೀವು ಏನು ಮಾಡಿದ್ದೀರಾ ಎನ್ನುವುದು ಬೇಕಾಗಿಲ್ಲ. ಆ ಬಗ್ಗೆ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಅನುದಾನವನ್ನು ನಾನು ಹರಪನಹಳ್ಳಿಗೆ ತರಲು ಬಯಸುತ್ತೇನೆ.
ಮುಂದಿನ 2-3 ದಿನಗಳಲ್ಲಿ ಮತ್ತೊಂದು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸುತ್ತೇನೆ. ಅಂದು ಬರುವಾಗ ತಮ್ಮ ಇಲಾಖೆಗಳ ಕುಂದು-ಕೊರತೆಗಳ ಪಟ್ಟಿ ಮಾಡಿಕೊಂಡು ಬರಬೇಕು ಎಂದು ಸೂಚಿಸಿದರು. ಸನ್ಮಾನ ಇವತ್ತಿಗೆ ಕೊನೆಯಾಗಬೇಕು. ಮುಂದಿನ ದಿನಗಳಲ್ಲಿ ಯಾರು ನನಗೆ ಸನ್ಮಾನಿಸುವುದು ಬೇಡ ಎಂದರು.
ಇದನ್ನೂ ಓದಿ:ಸಮಸ್ಯೆ ಬಗೆಹರಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ ಮಾತನಾಡಿ, ಹರಪನಹಳ್ಳಿ ತಾಲೂಕಿನ ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಅವುಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಡಳಿತ ಇಲಾಖೆಗಳ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಲುಪಿಸಲು ಮುಂದಾಗಬೇಕು ಎಂದರು.
ಶಾಸಕರ ಮಾರ್ಗದರ್ಶನದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಹರಪನಹಳ್ಳಿಗೆ ಉತ್ತಮ ಹೆಸರು ಬರಲು ನಾವೆಲ್ಲರೂ ಶ್ರಮಿಸೋಣ ಎಂದರು.
ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ, ತಾಪಂ ಇಒ ಕೆ.ಆರ್.ಪ್ರಕಾಶ, ಬಿಇಒ ಯು.ಬಸವರಾಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಇಸಿಒ ಕಬೀರನಾಯ್ಕ ಇತರರಿದ್ದರು.