More

    ಸಮಸ್ಯೆ ಬಗೆಹರಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

    ಎಚ್.ಡಿ.ಕೋಟೆ: ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ತಾಲೂಕಿನಲ್ಲಿ ಹೆಚ್ಚು ದೂರುಗಳು ಲೋಕಯುಕ್ತಕ್ಕೆ ಬರುತ್ತಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಲೋಕಯುಕ್ತ ಎಸ್ಪಿ ಸುರೇಶ್ ಬಾಬು ಎಚ್ಚರಿಕೆ ನೀಡಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡಿ ಮಾತನಾಡಿದರು.

    ತಾಲೂಕಿನಿಂದ ಒಟ್ಟು 15 ದೂರುಗಳು ಬಂದಿದ್ದು, ಅದರಲ್ಲಿ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಸಾರ್ವಜನಿಕರು ದೂರು ನೀಡಿದಾಗ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು. ಸರ್ಕಾರ ನಮ್ಮನ್ನು ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ನೇಮಕ ಮಾಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಇತ್ಯಾರ್ಥ ಮಾಡಲು ಸಾಧ್ಯವಾಗದ ಅರ್ಜಿಗಳಿಗೆ ಹಿಂಬರಹ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದರು.

    ಮತ್ತೊಮ್ಮೆ ಕಂದಾಯ ಇಲಾಖೆ ವಿರುದ್ಧ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪಿ.ಎಸ್.ಮಹೇಶ್ ಅವರಿಗೆ ಎಚ್ಚರಿಕೆ ನೀಡಿದರು.

    ಮಟಕೆರೆ ಕೃಷ್ಣ ಎಂಬುವರು ಮಾತನಾಡಿ, ಸವ್ವೆ ಗ್ರಾಮದ ಸ.ನಂ.58, 59, 65, 70 ರ ಸರ್ಕಾರಿ ಜಮೀನು ಸೇರಿದಂತೆ ಸ್ಥಳೀಯರ ಜಮೀನನ್ನು ದಬ್ಬಾಳಿಕೆ ಮೇಲೆ ಬೆಂಗಳೂರು ಮೂಲದ ರವಿಬಾಬು ಎಂಬ ವ್ಯಕ್ತಿ ಸ್ವಾಧೀನದಲ್ಲಿ ಇದ್ದು, ಜಮೀನು ದುರಸ್ತಿ ಮಾಡಿಕೊಡುವಂತೆ ತಹಸೀಲ್ದಾರ್ ಮತ್ತು ಸರ್ವೇ ಇಲಾಖೆಗೆ ಅರ್ಜಿ ನೀಡಲಾಗಿದೆ. ಈ ಜಮೀನು ರವಿಬಾಬು ಎಂಬ ವ್ಯಕ್ತಿಗೆ ಸೇರಿದ್ದಲ್ಲ. ಬದಲಾಗಿ ನಮಗೆ ಮತ್ತು ಸರ್ಕರಕ್ಕೆ ಸೇರಿದ್ದಾಗಿದ್ದು, ಇದನ್ನು ಸರ್ಕಾರ ವಶಕ್ಕೆ ಪಡೆದು ಕೊಳ್ಳಬೇಕು ಎಂದು ತಹಸೀಲ್ದಾರ್ ಅವರಿಗೆ ಲಿಖಿತವಾಗಿ ದೂರು ನೀಡಲಾಗಿದ್ದರೂ ಸರ್ಕಾರಿ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

    ರವಿಬಾಬು ಕ್ರಯದಾರ ಅಲ್ಲದಿದ್ದರೂ ಆತನ ಹೆಸರನ್ನು ಆರ್‌ಟಿಸಿ ಕಾಲಂ ನಂ.9 ರಲ್ಲಿ ಅಧಿಕಾರಿಗಳು ನಮೂದಿಸಿ ಅಕ್ರಮ ಎಸಗಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಲೋಕಯುಕ್ತ ಎಸ್ಪಿ , ರವಿಬಾಬು ಸರ್ಕಾರದ ನಿಯಮದ ಪ್ರಕಾರ ಖರೀದಿ ಮಾಡಿದ್ದಾನೆಯೇ ಎಂಬುದನ್ನು ತಹಸೀಲ್ದಾರ್ ಪರಿಶೀಲಿಸಬೇಕು. ಇಲ್ಲದಿದ್ದರೆ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

    ಹಂಪಾಪುರ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಅನೇಕ ದೂರಗಳು ಬರುತ್ತಿದ್ದು, ನನ್ನ ಮುಂದೆ ಹಾಜರಾಗಲು ಅವರಿಗೆ ನೋಟಿಸ್ ಜಾರಿ ಮಾಡುವಂತೆ ಲೋಕಯುಕ್ತ ಇನ್ಸೆಪೆಕ್ಟರ್‌ಗೆ ಸೂಚನೆ ನೀಡಿದರು.

    ಈ ಹಿಂದೆ ದರಖಾಸ್ತು ಸಮಿತಿ ಸದಸ್ಯರಾಗಿದ್ದ ಮೊತ್ತ ಬಸವರಾಜಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ನ ಸಹೋದರರ ಹೆಸರಿನಲ್ಲಿ ಜಮೀನು ಇದ್ದರೂ ತಹಸೀಲ್ದಾರ್ ಮೇಲೆ ಒತ್ತಡ ಹಾಕಿ ಸಾಗುವಳಿ ಮಂಜೂರು ಮಾಡಲು ಶಿಫಾರಸು ಮಾಡಿದ್ದಾರೆ. ಹಾಗಾಗಿ ಅದನ್ನು ತಡೆಹಿಡಿದು ಅರ್ಹರಿಗೆ ಸಾಗುವಳಿ ದೊರಕುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಬೇಕು ಹಾಗೂ ಸುಳ್ಳು ಮಾಹಿತಿ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾದಪುರ ಕುಮಾರಸ್ವಾಮಿ ಎಂಬುವರು ಒತ್ತಾಯಿಸಿದರು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಲೋಕಯುಕ್ತ ಎಸ್ಪಿ ಸೂಚಿಸಿದರು.

    ಜಮೀನು ಖಾತೆ ಮಾಡಿಕೊಡುವುದು, ಆರ್‌ಟಿಸಿ ಕಾಲಂ ನಲ್ಲಿ ಹೆಸರು ನಮೂದಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ದೂರು ದಾಖಲಾಯಿತು. ಲೋಕಯುಕ್ತ ಡಿವೈಎಸ್ಪಿ ಕೃಷ್ಣಯ್ಯ, ಇನ್‌ಸ್ಪೆಕ್ಟರ್‌ಗಳಾದ ಜಯರತ್ನಾ, ರೂಪಶ್ರೀ, ತಾಪಂ ಇಒ ಜೆರಾಲ್ಡ್ ರಾಜೇಶ್, ಡಾ.ಟಿ.ರವಿಕುಮಾರ್, ರಂಗಸ್ವಾಮಿ, ನಾರಾಯಣಸ್ವಾಮಿ, ರಾಮಸ್ವಾಮಿ, ನಾಗರಾಜು, ರಾಮೇಗೌಡ, ಮುಖಂಡರಾದ ಅಕ್ಬರ್ ಪಾಷ, ಚೌಡಹಳ್ಳಿ ಜವರಯ್ಯ, ಉಮೇಶ್, ಕಂದೇಗಾಲ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts