ಹಿರಿಯರನ್ನು ಗೌರವಿಸುವುದು ಎಲ್ಲರ ಹೊಣೆಗಾರಿಕೆ

ಹಿರಿಯರನ್ನು ಗೌರವಿಸುವುದು ಎಲ್ಲರ ಹೊಣೆಗಾರಿಕೆ
Published on

ಅರಕಲಗೂಡು: ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಕರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ಹೇಳಿದರು.

ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಆಡಳಿತ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ವಕೀಲರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಿರಿಯ ನಾಗರಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಟುಂಬಕ್ಕಾಗಿ ದುಡಿದು ವೃದ್ಧರಾದ ಹಿರಿಯರನ್ನು ಪಾಲನೆ ಮಾಡುವುದು ಮಕ್ಕಳ ಕರ್ತವ್ಯ. ಆದರೆ, ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ, ಹಿರಿಯ ನಾಗರಿಕರ ಸಂರಕ್ಷಣೆಗೆ ಸರ್ಕಾರ ಕಾನೂನು ರೂಪಿಸಿದ್ದು, ಇದರ ಬಗ್ಗೆ ಅರಿವು ಪಡೆದು ತೊಂದರೆಗೊಳಗಾದ ಹಿರಿಯ ನಾಗರಿಕರು ಪ್ರಯೋಜನ ಪಡೆಯಬಹುದಾಗಿದೆ ಎಂದರು.

ವಕೀಲ ಜನಾರ್ದನಗುಪ್ತ ಹಿರಿಯ ನಾಗರಿಕರ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಟಿ.ಮಲ್ಲೇಶ್, ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ವೈ. ಪ್ರಶಾಂತ್ ಕುಮಾರ್ ಮಾತನಾಡಿದರು. ನ್ಯಾಯಾಧೀಶರಾದ ಚಂಪಾಶ್ರೀ, ವಕೀಲರ ಸಂಘದ ಕಾರ್ಯದರ್ಶಿ ಕೆ.ಆರ್.ಶ್ರೀಧರ್, ಸರ್ಕಾರಿ ವಕೀಲ ಶಿವಪ್ಪ, ಪುಟ್ಟಲಕ್ಷ್ಮೀ, ಶೋಭಾ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈರೇಗೌಡ, ವಕೀಲ ಶಂಕರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net