

ಕಾಸರಗೋಡು: ಜಿಲ್ಲಾ ಪೊಲೀಸ್ ಇಲಾಖೆಯ ಘನತೆ ಮತ್ತು ಖ್ಯಾತಿ ಹೆಚ್ಚಿಸಿದ್ದ ಶ್ವಾನದಳದ ‘ರೂಣಿ’ ಸೇವೆಯಿಂದ ನಿವೃತ್ತಿ ಹೊಂದಿದ್ದು, ಇಲಾಖೆ ಗೌರವದೊಂದಿಗೆ ಬೀಳ್ಕೊಟ್ಟಿದೆ.
ಕಾಸರಗೋಡು ಕೆ-9 ಸ್ಕ್ವಾಡ್‌ನ ಟ್ರಾಕರ್ ಆಗಿದ್ದ ಪೊಲೀಸ್ ಶ್ವಾನ ಇದಾಗಿದ್ದು, ಸುಮಾರು ಎಂಟೂವರೆ ವರ್ಷಗಳ ಸೇವೆ ನಂತರ ರೂಣಿ ತೃಶ್ಯೂರಿನ ವಿಶ್ರಾಂತಿ ಕೇಂದ್ರದಲ್ಲಿ ಕಾಲ ಕಳೆಯಲಿದ್ದಾಳೆ.
ಜರ್ಮನ್ ಶೆಫರ್ಡ್ ವಿಭಾಗಕ್ಕೆ ಸೇರಿದ ರೂಣಿಯನ್ನು ಒಂದೂವರೆ ವರ್ಷ ಪ್ರಾಯದಲ್ಲಿ ತೃಶ್ಯೂರಿನ ಡಾಗ್ ಟ್ರೈನಿಂಗ್ ಸೆಂಟರ್‌ನಿಂದ ಒಂಬತ್ತು ತಿಂಗಳ ತರಬೇತಿಯ ನಂತರ 2016 ಏ.10ರಂದು ಕಾಸರಗೋಡು ಕೆ-9 ಸ್ಕ್ವಾಡ್ ಶ್ವಾನದಳಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಶ್ವಾನದಳದ ಕಾರ್ಯಾಚರಣೆಯಲ್ಲಿ ಕೊಲೆ, ಕಳವು, ನಾಪತ್ತೆ ಹೀಗೆ ಹಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಕಾರ್ಯದಲ್ಲಿ ರೂಣಿ ಪೊಲೀಸರಿಗೆ ಸಹಾಯ ಒದಗಿಸಿದ್ದಳು.
ರೂಣಿ ಕಾಸರಗೋಡಿನ ಶ್ವಾನವಿಭಾಗಕ್ಕೆ ಸೇರ್ಪಡೆಗೊಂಡ ಮೊದಲ ಕಾರ್ಯಚರಣೆಯಲ್ಲೇ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಳು. ಚಿತ್ತಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯ ಬಂಧನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರೂಣಿ ನಂತರ ವಿವಿಧ ಠಾಣೆಗಳಲ್ಲಿ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಯಶಸ್ಸು ಗಿಟ್ಟಿಸಿದ್ದಳು.
ಜಿಲ್ಲಾ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಹಾಗೂ ಇತರ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೂಣಿಯನ್ನು ಬೀಳ್ಕೊಡಲಾಗಿತ್ತು.
ಪದಕ ಗಳಿಕೆಯಲ್ಲೂ ಮುಂದು
ಪೊಲೀಸ್ ಮೀಟ್‌ಗಳಲ್ಲಿ ಪದಕ ಗಳಿಕೆಯಲ್ಲೂ ಮುಂಚೂಣಿಯಲ್ಲಿದ್ದಳು. 2018ರ ಪೊಲೀಸ್ ಡ್ಯೂಟಿಮೀಟ್‌ನಲ್ಲಿ ಸಿಲ್ವರ್ ಮೆಡಲ್, 2019ರಲ್ಲಿ ಲಕ್ನೋದಲ್ಲಿ ನಡೆದ ಅಖಿಲಭಾರತ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಪಾಲ್ಗೊಂಡು ಏಳನೇ ಸ್ಥಾನ ಗಳಿಸಿದ್ದಳು. ಜಿಲ್ಲಾ ಡಾಗ್ ಸ್ಕ್ವಾಡ್‌ನ ಪೊಲೀಸ್ ಅಧಿಕಾರಿಗಳಾದ ಎಸ್.ರಂಜಿತ್ ಹಾಗೂ ಆರ್.ಪ್ರಜೇಶ್ ರೂಣಿಗೆ ತರಬೇತಿ ನೀಡಿದ್ದರು.