ಕಲಿಸಿದ ಗುರುಗಳ ಗೌರವಿಸಿದ ಶಿಷ್ಯಂದಿರು

Respected disciples of taught masters
ಹುನ್ನೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಕಲಹಳ್ಳಿ ವೆಂಕಟೇಶ್ವರ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಿತರ ಭಾವಸ್ಪಂದನ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರು ಉದ್ಘಾಟಿಸಿದರು. ವಿಶ್ವನಾಥ ಶಾಸ್ತ್ರಿಗಳು, ಡಾ.ಲಿಂಗಾನಂದ ಗವಿಮಠ, ಶಿವಲಿಂಗಪ್ಪ ಬಂಗಿ, ಪಂಡಿತಪ್ಪ ಓಣಿ ಇತರರಿದ್ದಾರೆ.
Published on

ಜಮಖಂಡಿ(ಗ್ರಾ): ಬಾಲ್ಯ ಹಾಗೂ ಪ್ರೌಢಾವಸ್ಥೆಯಲ್ಲಿ ಜತೆ ಜತೆಯಾಗಿ ಶಿಕ್ಷಣ ಪೂರೈಸಿ ಎರಡು ದಶಕದ ಬಳಿಕ ಎಲ್ಲರೂ ಒಂದೆಡೆ ಸೇರಿದಾಗ ಅವರಲ್ಲಿ ಕಾಣುವ ಆನಂದ ಭಾಸ್ಪ ವರ್ಣಿಸಲಸದಳ. ಹಳೇ ನೆನಪುಗಳನ್ನು ಮೆಲಕು ಹಾಕುತ್ತ ಎಸ್‌ಎಸ್‌ಎಲ್‌ಸಿ ಬಳಿಕ ಭವಿಷ್ಯ ರೂಪಿಸಿಕೊಂಡ ಬಗೆಯನ್ನು ಸ್ನೇಹಿತರು ಪರಸ್ಪರ ಹಂಚಿಕೊಂಡಾಗ ಹೊರಹೊಮ್ಮಿದ ಸಂಭ್ರಮದ ಭಾವಸ್ಪಂದನಕ್ಕೆ ಸಮೀಪದ ಕಲಹಳ್ಳಿ ವೆಂಕಟೇಶ್ವರ ದೇವಸ್ಥಾನ ಸಭಾಭವನ ಸಾಕ್ಷಿಯಾಯಿತು.

ತಾಲೂಕಿನ ಹುನ್ನೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ 1990 ರಿಂದ 2000ರವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಕಲಹಳ್ಳಿ ವೆಂಕಟೇಶ್ವರ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡ ಗುರುವಂದನೆ ಮತ್ತು ಸ್ನೇಹಿತರ ಭಾವಸ್ಪಂದನ ಕಾರ್ಯಕ್ರಮದಲ್ಲಿ ಇಂಥ ಒಂದು ಸನ್ನಿವೇಶ ಕಂಡುಬಂದಿತು.

ಜೀವನೋಪಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ, ಸರ್ಕಾರಿ ಹಾಗೂ ಸ್ವಂತ ಉದ್ಯೋಗ, ಖಾಸಗಿಯಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರೂ ಯಾರಲ್ಲೂ ಭೇದಭಾವ ಕಾಣದೆ ಬಾಲ್ಯದ ದಿನಗಳಂತೆಯೇ ಪರಸ್ಪರರು ಬೆರೆತು ಸ್ನೇಹವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳುವ ಜತೆಗೆ ತಮಗೆ ಕಲಿಸಿದ ಗುರುಗಳಿಗೆ ವಂದಿಸಿ ಧನ್ಯತಾ ಭಾವ ಮೆರೆದರು.

ಜಮಖಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಲ್. ಕೆ. ಗವಿಮಠ ಮಾತನಾಡಿ, ಗುರು ಶಿಷ್ಯರ ಸಂಬಂಧ ಅವಿನಾಭಾವದಿಂದ ಕೂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತರನ್ನು ಒಗ್ಗೂಡಿಸಿ ಗುರುವಿನ ಸ್ಮರಣೆಗಾಗಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹುನ್ನೂರು ಶಾಲೆಯ ಗೌರವ ಹೆಚ್ಚಿಸಿದೆ ಎಂದರು.

ಜಮಖಂಡಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸಹ ಶಿಕ್ಷಕ ಬಿ.ಕೆ. ಪಾಟೀಲ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಶಿಷ್ಯಂದಿರು ಗುರಿ ಸಾಧನೆ ಮಾಡಿದ್ದನ್ನು ಕಂಡಾಗ ಸಂತೃಪ್ತಿ ಉಂಟಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸೇವೆಯನ್ನು ಪರಿಪೂರ್ಣವಾಗಿ ಮಾಡಿದರೆ ಅವರ ಜೀವನವೂ ಪರಿಪೂರ್ಣವಾಗುತ್ತದೆ ಎಂದರು.

ನಿವೃತ್ತ ಶಿಕ್ಷಕ ರಂಗಪ್ಪ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಗುರುಗಳು ಮತ್ತು ಹಿರಿಯರಿಗೆ ಗೌರವ ಕೊಡಬೇಕು. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಬೇಕು. ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಹುನ್ನೂರಿನ ಕೊಣ್ಣೂರ ಮಠದ ವಿಶ್ವನಾಥ ಶಾಸ್ತ್ರಿಗಳು ಆಶೀರ್ವಚನ ನೀಡಿದರು.

ಹುನ್ನೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಕಲಹಳ್ಳಿ ವೆಂಕಟೇಶ್ವರ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಿತರ ಭಾವಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಳೆಯ ವಿದ್ಯಾರ್ಥಿಗಳು.
ಹುನ್ನೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಕಲಹಳ್ಳಿ ವೆಂಕಟೇಶ್ವರ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಿತರ ಭಾವಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಳೆಯ ವಿದ್ಯಾರ್ಥಿಗಳು.

ನಿವೃತ್ತ ಪ್ರಾಚಾರ್ಯ ಎಸ್.ಎಂ.ಕೋಲೂರ, ನಿವೃತ್ತ ಶಿಕ್ಷಕರಾದ ಕೆ.ಎಂ.ಪೂಜಾರಿ, ಐ.ಪಿ.ರಾಠೋಡ, ರಂಗಪ್ಪ ಮುನವಳ್ಳಿ, ಶಿವಲಿಂಗಪ್ಪ ಬಂಗಿ, ಎಸ್.ಎಚ್. ಕಳಸಣಿ, ಅಂಬಿ, ಪಂಡಿತಪ್ಪ ಓಣಿ, ಶೆಟ್ಟಿಮುಂಡಿ ದಂಪತಿ, ಎಸ್.ಎಸ್.ಮನ್ನಿಕೇರಿ, ಎಸ್.ಡಿ.ಕುಂಬಾರ, ಹೊಸೂರ, ಸರಸ್ವತಿ ಗೋಠೆ, ಎಚ್.ಡಿ.ಕುಂಬಾರ, ಆರ್.ಟಿ.ಪೋಶೆಟ್ಟಿ, ಬೊಮ್ಮಣ್ಣವರ, ಗುಡ್ಲಮನಿ, ಗೊಂಗಡಿ, ಚಿತ್ರಕಲಾ ಶಿಕ್ಷಕ ಮಂಜುನಾಥ ಮಾನೆ, ಉಪನ್ಯಾಸಕ ಎಲ್. ಕೆ. ಗವಿಮಠ, ಶಿಕ್ಷಕ ಬಿ.ಕೆ.ಪಾಟೀಲ, ಕೆ. ಬಿ.ಮಠ, ಸಂಜಯ ಕಳ್ಳಿಮಠ, ಚಂದ್ರಶೇಖರ ಬಿರಾದಾರ, ಮನಗೂಳಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ದೇಶಪಾಂಡೆ, ನಿವೃತ್ತ ಸಹಾಯಕಿ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅರಂಭದಲ್ಲಿ ಮೌನಾಚರಣೆ ಮಾಡಿ ಶರಣ ಈಶ್ವರ ಮಂಟೂರ, ಶಿಕ್ಷಕ ಎಸ್.ಎಂ.ಹಲ್ಯಾಳ, ನಿವೃತ್ತ ಹಿರಿಯ ಶಿಕ್ಷಕ ಪಿ.ಆರ್.ಕುಲಕರ್ಣಿ ಸೇರಿ ದಿವಂಗತರಾಗಿರುವ ಶಿಕ್ಷಕ, ಬೋಧಕೇತರ ಸಿಬ್ಬಂದಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಹಳೆಯ ವಿದ್ಯಾರ್ಥಿಗಳಾದ ಮಂಜುಳಾ ಕೋಳಿ ಸ್ವಾಗತಿಸಿದರು. ಎಸ್.ಬಿ.ಮಠಪತಿ, ಲಕ್ಷ್ಮೀ ಬಾಣಕಾರ ನಿರೂಪಿಸಿದರು. ಸಂಗಪ್ಪ ಬಾಣಕಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net