

ಹಾಸನ: ನಗರವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿ ಮತ್ತು ಸುಂದರವಾಗಿ ಉಳಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಅನನ್ಯವಾಗಿದೆ ಎಂದು ಡಿಸಿ ಲತಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಬೆಳಗ್ಗೆ ಜನರು ಏಳುವ ಮೊದಲೇ ಪೌರಕಾರ್ಮಿಕರು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಮಹಾತ್ಮ ಗಾಂಧೀಜಿ ಹೇಳಿದಂತೆ ಸ್ವಚ್ಛತೆ ದೇವರ ಹತ್ತಿರ ಕರೆದೊಯ್ಯುವ ಮಾರ್ಗ. ಈ ಸ್ವಚ್ಛತೆಯ ಹಿಂದಿರುವ ಶ್ರಮ ಪೌರ ಕಾರ್ಮಿಕರದ್ದೇ ಆಗಿದೆ. ಅವರ ಕೆಲಸವನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯ, ಭದ್ರತೆ, ಶಿಕ್ಷಣದ ಬಗ್ಗೆ ಗಮನಹರಿಸಬೇಕೆಂದರು. ಮಹಾಪೌರರಾದ ಗಿರೀಶ್ ಚನ್ನವೀರಪ್ಪ, ಆಯುಕ್ತ ಕೃಷ್ಣಮೂರ್ತಿ ಇತರರು ಇದ್ದರು.