ಗಾಂಜಾ ಸಾಗಿಸುತ್ತಿದ್ದ ರೆಸಾರ್ಟ್ ಮಾಲೀಕರ ಬಂಧನ

30KWR4
Published on

ಕಾರವಾರ: ಗಾಂಜಾ ಸಾಗಣೆ ಮಾಡುತ್ತಿದ್ದ ದಾಂಡೇಲಿಯ ಇಬ್ಬರು ಹೋಂ ಸ್ಟೇ ಮಾಲೀಕರು ಸೇರಿ ನಾಲ್ವರನ್ನು ಜಿಲ್ಲಾ ವಿಶೇಷ ತನಿಖಾ ತಂಡದ ಪೊಲೀಸರು ಶನಿವಾರ ಕಾರವಾರದಲ್ಲಿ ಬಂಧಿಸಿದ್ದಾರೆ.

ದಾಂಡೇಲಿ ಜಂಗಲ್ ರೆಸಿಡೆನ್ಸಿ ಮಾಲೀಕ ಅಂಜನಿಕುಮಾರ, ಶಾಂತಾರಾಮ ಪಟ್ಟಿಕೇರಿ, ಜಂಗಲ್ ನೈಟ್ ಹೋಂ ಸ್ಟೇ ಮಾಲೀಕ ಪವನಕುಮಾರ ಮಾದೇವ ಕೊನ್ನೂರು, ನಿರ್ಮಲ ನಗರದ ಯೋಗೇಶಕುಮಾರ್ ಚಂದ್ರಸಿಂಗ್ ರಜಪೂತ್ ಹಾಗೂ ಚಾಲಕ ಹಳೇ ದಾಂಡೇಲಿ ಸಾಮಿಲ್ ರಸ್ತೆಯ ಬಸಯ್ಯ ಬಸವರಾಜ ದೆಗಲೊಳ್ಳಿಮಠ ಬಂಧಿತರು. ಬಂಧಿತರಿಂದ 50 ಸಾವಿರ ರೂ. ಮೌಲ್ಯದ 1 ಕೆಜಿ 992 ಗ್ರಾಂ ಗಾಂಜಾ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಎರಡು ರೆಸಾರ್ಟ್​ಗಳ ಪರವಾನಗಿ ರದ್ದತಿಗೆ ಕ್ರಮ ವಹಿಸಲಾಗಿದೆ. ಶಿರಸಿಯಿಂದ ಕಾರವಾರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ವಿಶೇಷ ತನಿಖಾ ದಳದ ಪ್ರೇಮನಗೌಡ ಪಾಟೀಲ, ಹನುಮಂತ ರೆಡ್ಡಿ, ಸಂತೋಷ, ಭಗವಾನ್ ಗಾಂವಕರ್, ವೀರೇಶ ನಾಯ್ಕ ಇವರೊಂದಿಗೆ ಕಾರವಾರ ಲಂಡನ್ ಬ್ರಿಜ್ ಬಳಿ ವಶಕ್ಕೆ ಪಡೆದರು. ಡಿವೈಎಸ್​ಪಿ ವ್ಯಾಲೆಂಟೈನ್ ಡಿಸೋಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net