

ನಂಜನಗೂಡು: ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಸ್ಮರಣಾರ್ಥ ಶಾಸಕ ದರ್ಶನ್ ಧ್ರುವನಾರಾಯಣ ಸ್ನೇಹ ಬಳಗದ ವತಿಯಿಂದ ಅ.29ರಂದು 35 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಸ್ನೇಹ ಬಳಗದ ಸಂಚಾಲಕ ಚೇತನ್ ತಿಳಿಸಿದರು.
ಭಾನುವಾರ ಸಂಜೆ 4 ಗಂಟೆಗೆ ನಗರದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಶಾಸಕರಾದ ದರ್ಶನ್ ಧ್ರುವನಾರಾಯಣ, ಗಣೇಶ್‌ಪ್ರಸಾದ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂಗಳಿಗಿ ಪೈ. ಪ್ರಕಾಶ್ ಪಾಟೀಲ್ ಮತ್ತು ಬೆಳಗಾವಿಯ ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ಪೈ.ಮಹೇಶ್ ಲಂಗೋಟಿ ನಡುವೆ ಒಂದು ಗಂಟೆ ಕಾಲ ಕುಸ್ತಿ ಪಂದ್ಯ ನಡೆಯಲಿದೆ. ಎರಡು ಜೊತೆ ಮಾರ್ಫಿಟ್ ಕುಸ್ತಿಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಕುಸ್ತಿ ಪಂದ್ಯಾವಳಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸ್ನೇಹ ಬಳಗದ ವಿಶ್ವಾಸ್, ಸೂರ್ಯಕುಮಾರ್, ಸುನೀಲ್‌ಕುಮಾರ್, ಜೀವನ್, ಪೈ.ಸಿದ್ದರಾಜು ಹಾಜರಿದ್ದರು.