ಸೌಲಭ್ಯಗಳಿಲ್ಲದೆ ನಿವಾಸಿಗಳ ಪರದಾಟ

ಕಾರಟಗಿಯ ವಸುಂಧರಾ ನಗರ ಬಡಾವಣೆಗೆ ತೆರಳುವ ಮುಖ್ಯರಸ್ತೆ ಕೆಸರು ಗದ್ದೆಯಂತಾಗಿರುವುದು.
ಕಾರಟಗಿಯ ವಸುಂಧರಾ ನಗರ ಬಡಾವಣೆಗೆ ತೆರಳುವ ಮುಖ್ಯರಸ್ತೆ ಕೆಸರು ಗದ್ದೆಯಂತಾಗಿರುವುದು.
Published on

ಕಾರಟಗಿ: ಪಟ್ಟಣದ 12ನೇ ವಾರ್ಡ್ ವಸುಂಧರಾ ನಗರ ಬಡಾವಣೆಯಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುತ್ ದೀಪಗಳಿಲ್ಲದೆ ನಿವಾಸಿಗಳು ದಿನನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸುಮಾರು 20 ಎಕರೆ ಪ್ರದೇಶದ ಬಡಾವಣೆಯಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ನಾಗರಿಕ ಸೌಲಭ್ಯಗಳಿಲ್ಲದೆ ನಿವಾಸಿಗಳು ನಿತ್ಯ ಗೋಳಾಡುತ್ತಿದ್ದಾರೆ. ವನಸಿರಿ ಎಂಬ ಹೆಸರಿನ ಬಡಾವಣೆಯಲ್ಲೆ ಕಲುಷಿತ ನೀರು, ತ್ಯಾಜ್ಯದ ರಾಶಿ, ಅನುಪಯುಕ್ತ ಬೀದಿ ದೀಪಗಳು, ಅಸಮರ್ಪಕ ರಸ್ತೆಗಳಿವೆ.

ಬಡಾವಣೆಯಲ್ಲಿ ಸಮರ್ಪಕ ರಸ್ತೆ, ಚರಂಡಿಗಳಿಲ್ಲದೆ ರಾತ್ರಿ ವೇಳೆ ಸಾರ್ವಜನಿಕರು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಬಡಾವಣೆಗೆ ತೆರಳುವ ಮುಖ್ಯರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ. ಇತ್ತೀಚೆಗೆ ಮಳೆಯಿಲ್ಲದಿದ್ದರೂ ರಸ್ತೆಯ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಕೆಸರಿನಿಂದ ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಇನ್ನು ಬೈಕ್ ಸವಾರರು ಈ ರಸ್ತೆಗಿಳಿಯಲಾಗದೆ ದೂರ ಕ್ರಮಿಸಿ ಮತ್ತೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದು, ದಿನನಿತ್ಯ ಸುತ್ತುವರೆದು ಮನೆಗೆ ತಲುಪುವಂತಾಗಿದೆ.

ಬಡಾವಣೆಯ ರಸ್ತೆ ಪಕ್ಕದ ಮರವೊಂದು ಉರುಳಿ ಬೀಳುವ ಹಂತದಲ್ಲಿದ್ದು ಸುಮಾರು ತಿಂಗಳಿನಿಂದ ಮತ್ತೊಂದು ಮರಕ್ಕೆ ಆಸರೆಯಾಗಿ ನಿಂತಿದೆ. ಪುರಸಭೆ ಆಡಳಿತ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಕೆಲವೆಡೆ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಸಂಚರಿಸಲು ಆತಂಕ ಪಡುವಂತಾಗಿದೆ.

ಚರಂಡಿಗಳಿಲ್ಲ: ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಕೆಲವೆಡೆ ರಸ್ತೆಗಳ ಮಧ್ಯಭಾಗದಲ್ಲಿ ಹರಿಯುತ್ತಿವೆ. ಬಹುತೇಕ ಕಡೆ ನೀರು ನಿಂತು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇನ್ನು ಮನೆ ಮನೆಗೆ ಕಸ ವಿಲೇವಾರಿ ವಾಹನ ಸರಿಯಾಗಿ ಬಾರದ ಕಾರಣ ನಿವಾಸಿಗಳು ಬಡಾವಣೆಯ ಸಿಎ ನಿವೇಶನಗಳಲ್ಲಿ ಕಸ ಚೆಲ್ಲುತ್ತಿದ್ದು, ತಿಂಗಳುಗಳು ಉರುಳಿದರೂ ವಿಲೇವಾರಿಗೆ ಮುಂದಾಗಿಲ್ಲ.

ಗೋಳು ಕೇಳೋರಿಲ್ಲ: ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಿವಾಸಿಗಳು ಪುರಸಭೆಗೆ ಹಲವಾರು ಬಾರಿ ಅಲವತ್ತುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಭರಪೂರ ಅಭಿವೃದ್ಧಿ ಎಂದು ಹೇಳಿಕೊಳ್ಳುವ ಸಚಿವ ಶಿವರಾಜ ತಂಗಡಗಿ ನಿವಾಸಿಗಳ ಮನವಿಗೆ ಸ್ಪಂದಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net