

ಪಾಂಡವಪುರ: ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಲವಂತ ಮಾಡುವ ಜತೆಗೆ ಹಿಂದು ಧರ್ಮದ ಆಚಾರಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ವಿಸಿ ಕಾಲನಿ ನಿವಾಸಿಗಳು ಶುಕ್ರವಾರ ಪೊಲೀಸರಿಗೆ ದೂರು ಸಲ್ಲಿಸಿ ಬಳಿಕ ಪ್ರತಿಭಟನೆ ನಡೆಸಿದರು.
ಬಡಾವಣೆಯಲ್ಲಿ ಈಗಾಗಲೇ ಮತಾಂತರಗೊಂಡಿರುವ ಏಳೆಂಟು ಕುಟುಂಬದ ಸದಸ್ಯರು ನಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರತಿನಿತ್ಯ ಬಲವಂತ ಮಾಡುತ್ತಿದ್ದಾರೆ. ನಮ್ಮ ಧರ್ಮದ ಸಂಪ್ರದಾಯಗಳನ್ನು ಪಾಲಿಸಲು ಬಿಡದೆ ತೊಂದರೆ ಕೊಡುತ್ತಿದ್ದಾರೆ. ರಂಗೋಲೆ ಹಾಕುವುದು, ತೋರಣ ಕಟ್ಟುವ ವಿಚಾರವಾಗಿ ಗಲಾಟೆ ಮಾಡಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ಬಲವಂತದ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಹಿಂದುಳಿದ ವರ್ಗ ಮತ್ತು ಪೌರ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಪಟ್ಟಣದ ವಿಸಿ ಕಾಲನಿಯಲ್ಲಿ ಬಲವಂತದ ಮತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಹಲವು ಕುಟುಂಬಗಳ ಸದಸ್ಯರು ಮತಾಂತರಗೊಂಡಿದ್ದಾರೆ. ಆ ಕುಟುಂಬದ ಸದಸ್ಯರನ್ನು ಮುಂದಿಟ್ಟುಕೊಂಡು ಇತರರಿಗೆ ಮತಾಂತರಗೊಳ್ಳುವಂತೆ ತೊಂದರೆ ಕೊಡಲಾಗುತ್ತಿದೆ. ಈ ಜನರು ಬನ್ನಾರಿ ಅಮ್ಮನ ದೇವಸ್ಥಾನ ನಿರ್ಮಿಸಿ ಬಹಳ ವರ್ಷಗಳಿಂದಲೂ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಗಂಧದಕಡ್ಡಿ ಹಚ್ಚಬಾರದು, ಗಂಟೆ ಬಾರಿಸಬಾರದು, ಗಣಪತಿ ಪ್ರತಿಷ್ಠಾಪಿಸಬಾರದು ಎಂದು ಒತ್ತಡ ಹಾಕಲಾಗುತ್ತಿದೆ. ಹಿಂದು ಧರ್ಮದ ಆಚರಣೆಗೆ ತೊಂದರೆ ಕೊಡುವ ಮೂಲಕ ಜನರಲ್ಲಿ ಭಯ ಹುಟ್ಟಿಸಿ ಮತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಪ್ರತಿಭಟನೆ ಜತೆಗೆ ಪಾಂಡವಪುರ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಉಮೇಶ್ ಅವರು ಸ್ಥಳಕ್ಕೆ ಬಂದು ವಿಚಾರಣೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಹಿಂದು ಪರ ಸಂಘಟನೆಯ ಕಮಲೇಶ್, ವೇಣು, ಕನ್ನಂಬಾಡಿ ಸುರೇಶ್, ಬಡಾವಣೆ ನಿವಾಸಿಗಳಾದ ಮಾದೇಶ, ತಾರಾ, ಗೀತಾ, ಬನ್ನಾರಿ, ಉಷಾ, ಮುರುಗೇಶ, ಮಂಜುಳಾ, ಶಿವರಾಜು, ಸುಂದರ, ಮಣಿ, ನಾಗರಾಜು, ರವಿ, ಶಿಲ್ಪಾ, ಎ.ಅರ್ಜುನ, ಸಿ.ದೀಪಾ ಇತರರು ಇದ್ದರು.