ಜಲಾಗಾರ ಜನಾರೋಗ್ಯಕ್ಕೆ ಸಂಚಕಾರ!

Haveri 1- JALAGARA STORY
Published on

ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪರಿಣಾಮ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಇನ್ನೂ ಮಾಸಿಲ್ಲ. ಇಂತಹ ಘಟನೆಗಳು ನಡೆದ ಮೇಲಾದರೂ ಹಾವೇರಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಯ ಜನರಿಗೆ ಪೂರೈಕೆಯಾಗುವ ನೀರು, ನೀರಿನ ಪೈಪ್​ಲೈನ್, ಜಲಾಗಾರ ಮತ್ತು ಮೇಲ್ತೊಟ್ಟಿಗಳ ಸ್ವಚ್ಛತೆ ಕುರಿತು ವಿಶೇಷ ಮುತುವರ್ಜಿ ವಹಿಸಬೇಕಿದೆ. ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಜಲಾಗಾರ ಮತ್ತು ನೀರಿನ ಟ್ಯಾಂಕ್​ಗಳ ಸ್ವಚ್ಛತೆ ಕುರಿತು ‘ವಿಜಯವಾಣಿ’ ಜಿಲ್ಲಾ ತಂಡ ‘ರಿಯಾಲಿಟಿ ಚೆಕ್’ ನಡೆಸಿದೆ. ಈ ಕುರಿತು ಸಮಗ್ರ ವರದಿ ಇಲ್ಲಿದೆ.

ವಿಜಯವಾಣಿ ವಿಶೇಷ ಹಾವೇರಿ

ಜೀವ ಜಲ, ಜೀವಾಮೃತ, ಭೂಮಿಯ ಮೇಲಿನ ಅಮೃತ ಎಂದೆಲ್ಲ ಕರೆಸಿಕೊಳ್ಳುವ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವ್ಯಯಿಸುತ್ತವೆ. ಹೀಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಜಿಲ್ಲೆಯ ಹಲವು ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಜಿಲ್ಲೆಯ ಬಹುತೇಕ ಜಲಾಗಾರಗಳು, ನೀರಿನ ಟ್ಯಾಂಕ್​ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಕೆಲ ಸಂಗ್ರಹಾಗಾರಗಳಂತೂ ಕಸದ ತೊಟ್ಟಿಗಳಂತಾಗಿವೆ.

ಶುದ್ಧ ನೀರನ್ನೇ ಪೂರೈಸುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಅಧಿಕಾರಿ ವರ್ಗ ಮಾತ್ರ ಸಮಸ್ಯೆಯ ಗಂಭೀರತೆ ಕುರಿತು ಗಮನ ಹರಿಸುತ್ತಿಲ್ಲ.

ನದಿ ಅಥವಾ ಕೆರೆಯಿಂದ ಪೈಪ್​ಲೈನ್ ಮೂಲಕ ಜಲಾಗಾರಗಳಿಗೆ ನೀರು ಸರಬರಾಜಾಗುತ್ತದೆ. ಜಲಾಗಾರಗಳಲ್ಲಿ ಎರಡು, ಮೂರು ಹಂತಗಳಲ್ಲಿ ಶುದ್ಧೀಕರಿಸಿ, ನೀರಿನ ಟ್ಯಾಂಕ್​ನಲ್ಲಿ ಸಂಗ್ರಹಿಸಿ ನಂತರ ಮನೆ ಮನೆಗೆ ಪೂರೈಸಲಾಗುತ್ತದೆ. ಹೀಗೆ ನೀರು ಶುದ್ಧೀಕರಿಸುವ ಜಲಾಗಾರಗಳಲ್ಲಿ ಸ್ವಚ್ಛತೆ ಕಡಿಮೆಯಾಗಿದೆ. ನೀರು ಶುದ್ಧೀಕರಿಸಲು ನುರಿತ, ತಜ್ಞ ಸಿಬ್ಬಂದಿ ಅವಶ್ಯಕತೆ ಇದೆ. ಈ ಕುರಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಮನ ಹರಿಸಬೇಕಿದೆ.

ಜಿಲ್ಲೆಯ ವಿವಿಧ ನಗರ, ಪಟ್ಟಣಗಳ ಜಲಾಗಾರ, ನೀರಿನ ಟ್ಯಾಂಕ್​ಗಳ ಕುರಿತ ವಾಸ್ತವ ಸ್ಥಿತಿ ತಿಳಿಯೋಣ ಬನ್ನಿ...

ಹಾವೇರಿಯಲ್ಲಿ ತಿಪ್ಪೆಯಂತಾದ ಆವರಣ: ನಗರದ ಮುನ್ಸಿಪಲ್ ಮೈದಾನದಲ್ಲಿರುವ ಎರಡು ವಾಟರ್ ಟ್ಯಾಂಕ್​ಗಳ ಆವರಣ ತಿಪ್ಪೆ ಗುಂಡಿಯಂತಾಗಿದೆ. ಟ್ಯಾಂಕ್ ಕೆಳಗೆ ಕೊಳಚೆ ಸಂಗ್ರಹವಾಗಿದ್ದು, ದುರ್ನಾತ ಬೀರುವಂತಿದೆ.

ಟ್ಯಾಂಕ್ ಕೆಳಗೆ 10 ಅಡಿಗೂ ಎತ್ತರದ ಜಾಲಿ ಗಿಡ, ಕಂಠಿ ಬೆಳೆದಿದೆ. ಹಳೆಯ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದ್ದು, ಸಿಮೆಂಟ್ ಕಳಚಿ ಬಿದ್ದು, ಕಬ್ಬಿಣದ ಸರಳುಗಳು ಬಾಯಿ ಬಿಟ್ಟಿವೆ. ಕಬ್ಬಿಣದ ಮೆಟ್ಟಿಲುಗಳು ಮುರಿದಿವೆ. ಯಾವಾಗ ಕುಸಿದು ಬೀಳುತ್ತದೋ ಎಂಬಂತೆ ಭಾಸವಾಗುತ್ತಿದೆ. ಹಳೆಯ ಟ್ಯಾಂಕ್ ಪಕ್ಕದಲ್ಲೇ ಇತ್ತೀಚೆಗೆ ನಿರ್ವಿುಸಿದ ಟ್ಯಾಂಕ್ ಕೆಳಗೂ ಗಿಡ ಗಂಟಿ ಬೆಳೆದಿವೆ. ಟ್ಯಾಂಕ್ ಕೆಳಗೆ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ. ಅಲ್ಲದೆ, ಅನೈತಿಕ ಚಟುವಟಿಕೆ ತಾಣವಾಗಿಯೂ ಮಾರ್ಪಟ್ಟಿದೆ. ಗಂಭೀರ ಸ್ಥಿತಿಗೆ ತಲುಪಿರುವ ಟ್ಯಾಂಕ್ ನೀರು ಕುಡಿದವರನ್ನು ದೇವರೇ ಕಾಪಾಡಬೇಕು.

ಏಳು ಟ್ಯಾಂಕ್​ಗಳು: ನಗರದಲ್ಲಿ ಒಟ್ಟು ಏಳು ನೀರಿನ ಟ್ಯಾಂಕ್​ಗಳಿವೆ. ಮೂರ್ನಾಲ್ಕು ವರ್ಷಗಳಿಂದ ಇವು ಸ್ವಚ್ಛತೆ ಕಂಡಿಲ್ಲ. ಅಶ್ವಿನಿ ನಗರ (10 ಸಾವಿರ ಲೀ. ಸಾಮರ್ಥ್ಯ), ಲಕಮಾಪುರ (10 ಸಾವಿರ ಲೀ. ಸಾಮರ್ಥ್ಯ), ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಎರಡು (10 ಸಾವಿರ ಲೀ. ಮತ್ತೊಂದು 5 ಸಾವಿರ ಲೀ. ಸಾಮರ್ಥ್ಯ), ಸೂಲಮಟ್ಟಿಯಲ್ಲಿ ಎರಡು (10 ಸಾವಿರ ಲೀ. ಮತ್ತೊಂದು 15 ಸಾವಿರ ಲೀ. ಸಾಮರ್ಥ್ಯ) ಹಾಗೂ ನಾಗೇಂದ್ರನಮಟ್ಟಿ (10 ಸಾವಿರ ಲೀ. ಸಾಮರ್ಥ್ಯ)ಯಲ್ಲಿ ಒಂದು ನೀರಿನ ಟ್ಯಾಂಕ್​ನಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ವೈಜ್ಞಾನಿಕ ಕಾರ್ಯಾಚರಣೆ ಬೇಕಿದೆ: ಹಾವೇರಿಯ ಜಲಾಗಾರದಲ್ಲಿ ಶುದ್ಧೀಕರಣ ಕಾರ್ಯ ನಡೆದಿದೆಯಾದರೂ ಇನ್ನೂ ಹೆಚ್ಚಿನ ವೈಜ್ಞಾನಿಕ ಕಾರ್ಯಾಚರಣೆ ಮಾಡುವ ತಂಡ ಬೇಕಿದೆ. ಏಳೆಂಟು ತಿಂಗಳ ಹಿಂದೆ ಸಂಪ್ ಹಾಗೂ ವರ್ಷದ ಹಿಂದೆ ಕ್ಲಾರಿಫಾಲ್ಕುಲೇಶನ್ ಸ್ವಚ್ಛಗೊಳಿಸಲಾಗಿತ್ತು. ಕನಿಷ್ಠ ತಿಂಗಳಿಗೊಮ್ಮೆಯಾದರೂ ಇದನ್ನು ಸ್ವಚ್ಛಗೊಳಿಸಬೇಕಿದೆ.

ರಟ್ಟಿಹಳ್ಳಿಯಲ್ಲಿ 9 ತಿಂಗಳಿಂದ ಸ್ವಚ್ಛವಾಗಿಲ್ಲ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮೇಲ್ತೊಟ್ಟಿಗಳಿವೆ. ನದಿ ಹಾಗೂ ಬೋರ್​ವೆಲ್ ಮೂಲಕ ನಿತ್ಯವೂ ನೀರು ಪೂರೈಸಲಾಗುತ್ತಿದೆ. ಆದರೆ, ಕಳೆದ 8- 9 ತಿಂಗಳಿಂದ ಟ್ಯಾಂಕ್​ಗಳನ್ನು ಸ್ವಚ್ಛಗೊಳಿಸಿಲ್ಲ. ಹಾಗಾಗಿ, ರೋಗಭೀತಿ ಶುರುವಾಗಿದೆ. ಪಟ್ಟಣದ ಚಿಕ್ಕಯಡಚಿ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ, ಲಯನ್ಸ್ ಶಾಲೆ ಹಿಂಭಾಗ, ಕುಮಾರೇಶ್ವರ ಶಾಲೆಯ ಬಳಿ, ತೋಟಗಂಟಿ ಬಳಿ, ತಾಲೂಕು ಪಂಚಾಯಿತಿ ಬಳಿ ಮತ್ತು ಜನತಾ ಪ್ಲಾಟ್ ಬಳಿ ಟ್ಯಾಂಕ್​ಗಳನ್ನು ನಿರ್ವಿುಸಲಾಗಿದೆ. ಹೊಸ ಬಸ್ ನಿಲ್ದಾಣದ ಟ್ಯಾಂಕ್ ಹೊರತುಪಡಿಸಿ ಉಳಿದ ಎಲ್ಲ 5 ಟ್ಯಾಂಕ್​ಗಳಲ್ಲಿ ಸ್ವಚ್ಛತೆ ಇಲ್ಲ. ಮೊಣಕಾಲು ಉದ್ದದವರೆಗೆ ಮಣ್ಣು ತುಂಬಿರುವ ಸಾಧ್ಯತೆ ಇದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಟ್ಯಾಂಕ್​ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಪರಿಣಾಮ ಪ್ರತಿ ದಿನ ಆಶುದ್ಧ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಎಲ್ಲ ಟ್ಯಾಂಕ್​ಗಳನ್ನು ಸ್ವಚ್ಛಗೊಳಿಸಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸಂತೋಷ ಅವರು ಸಿಬ್ಬಂದಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಹಾನಗಲ್ಲನಲ್ಲಿ ವಾರಕ್ಕೊಮ್ಮೆ ಕ್ಲೀನ್: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಂದು ಮೇಲ್ಮಟ್ಟದ ಜಲಾಗಾರ ಹಾಗೂ ಎರಡು ನೆಲಮಟ್ಟದ ಜಲಾಗಾರಗಳಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ವಾರಕ್ಕೊಮ್ಮೆ ಇವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪಟ್ಟಣದ ಸುಮಾರು 40 ಸಾವಿರ ಜನರಿಗೆ ಇವುಗಳಿಂದಲೇ ಪುರಸಭೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಪಟ್ಟಣದ ಆನೆಕೆರೆಯಿಂದ ಶುದ್ಧೀಕರಣ ಘಟಕಕ್ಕೆ ನೀರನ್ನು ಸಾಗಿಸಿ, ಅಲ್ಲಿ ಫಿಲ್ಟರ್ ಬೆಡ್​ಗಳಲ್ಲಿ ಸಂಸ್ಕರಣಗೊಳಿಸಿ ನಂತರ ಜಲಾಗಾರಗಳಿಗೆ ಸಾಗಿಸಲಾಗುತ್ತದೆ. ನೀರು ಶುದ್ಧೀಕರಣ ಘಟಕದ ವ್ಯವಸ್ಥೆಗಾಗಿ ಪುರಸಭೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಿದೆ. ಪಟ್ಟಣದ ಶಿವಾಜಿ ನಗರದಲ್ಲಿರುವ ಮೇಲ್ಮಟ್ಟದ ಜಲಾಗಾರ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವುದರಿಂದ ಹಾಗೂ ಜನನಿಬಿಡ ಪ್ರದೇಶದಲ್ಲಿರುವುದರಿಂದ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಪ್ರತಿದಿನ ಗಮನಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ನೀರು ಶುದ್ಧೀಕರಣ ಘಟಕದಲ್ಲಿ ಬಳಸಲಾಗುವ ಕೆಮಿಕಲ್​ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನೀರಿನ ಬಣ್ಣ ಹಾಗೂ ರುಚಿ ಬದಲಾಗುತ್ತದೆ. ಕೂಡಲೇ ಸಾರ್ವಜನಿಕರು ದೂರು ಸಲ್ಲಿಸುತ್ತಾರೆ. ಹೀಗಾಗಿ ಪುರಸಭೆ ಅಧಿಕಾರಿಗಳು ಜಲಾಗಾರ ಮತ್ತು ಶುದ್ಧೀಕರಣ ಘಟಕಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net